ADVERTISEMENT

ಜ್ಞಾನವಾಪಿ ಮಸೀದಿ ಪ್ರಕರಣ: ಮಸೀದಿ ಸಮಿತಿಯ ಐದು ದಾವೆಗಳು ವಜಾ

ಪಿಟಿಐ
Published 19 ಡಿಸೆಂಬರ್ 2023, 8:00 IST
Last Updated 19 ಡಿಸೆಂಬರ್ 2023, 8:00 IST
ಜ್ಞಾನವಾಪಿ ಮಸೀದಿ
ಜ್ಞಾನವಾಪಿ ಮಸೀದಿ   

ನವದೆಹಲಿ: ಜ್ಞಾನವಾಪಿ ಮಸೀದಿ ಇರುವ ಸ್ಥಳದಲ್ಲಿ ದೇವಸ್ಥಾನವನ್ನು ಮರುಸ್ಥಾಪಿಸುವಂತೆ ಕೋರಿರುವ ಸಿವಿಲ್ ಮೊಕದ್ದಮೆಯ ನಿರ್ವಹಣಾ ಯೋಗ್ಯತೆ ಪ್ರಶ್ನಿಸಿ ದಾಖಲಿಸಲಾಗಿದ್ದ ಐದು ಮೊಕದ್ದಮೆಗಳನ್ನು ಅಲಹಾಬಾದ್ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.

ತೀರ್ಪನ್ನು ಪ್ರಕಟಿಸಿದ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರು, ವಾರಾಣಸಿ ನ್ಯಾಯಾಲಯದಲ್ಲಿ 1991ರಲ್ಲಿ ದಾಖಲಿಸಿರುವ ಈ ಮೊಕದ್ದಮೆಯನ್ನು ಪರಿಗಣಿಸಬಹುದಾಗಿದೆ. 1991ರ ಧಾರ್ಮಿಕ ಪೂಜಾ ಸ್ಥಳಗಳ ಕಾಯಿದೆ ಅಡಿ ಇದಕ್ಕೆ ನಿರ್ಬಂಧ ಅನ್ವಯವಾಗುವುದಿಲ್ಲ ಎಂದು ಹೇಳಿದರು.

ಜ್ಞಾನವಾಪಿ ಮಸೀದಿ ಜಾಗದ ಸಮಗ್ರ ಸಮೀಕ್ಷೆ ನಡೆಸುವಂತೆ ನ್ಯಾಯಾಲಯ ಸೂಚಿಸಿದೆ.

ADVERTISEMENT

ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ (ಎಐಎಂಸಿ) ಮತ್ತು ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಸಲ್ಲಿಸಿದ್ದ ಅರ್ಜಿಗಳು, ಜ್ಞಾನವಾಪಿ ಮಸೀದಿಯ ಸಮಗ್ರ ಸಮೀಕ್ಷೆಯನ್ನು ನಡೆಸಲು 2021ರ ಏಪ್ರಿಲ್ 8ರಂದು ವಾರಾಣಸಿ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿವೆ.

ಜ್ಞಾನವಾಪಿ ಇರುವ ಸ್ಥಳದಲ್ಲಿ ದೇವಾಲಯವನ್ನು ಮರುಸ್ಥಾಪಿಸುವಂತೆ ಕೋರಿ ವಾರಾಣಸಿ ನ್ಯಾಯಾಲಯದಲ್ಲಿ ಹಿಂದೂ ಅರ್ಜಿದಾರರು ದಾಖಲಿಸಿರುವ ದಾವೆಯ ನಿರ್ವಹಣೆಯನ್ನು ಎಐಎಂಸಿ, ಪ್ರಶ್ನಿಸಿತ್ತು.

ಆದರೆ, ಜ್ಞಾನವಾಪಿ ಮಸೀದಿಯು ದೇವಾಲಯದ ಒಂದು ಭಾಗವಾಗಿದೆ ಎಂದು ಹಿಂದೂ ಅರ್ಜಿದಾರರು ವಾದಿಸಿದ್ದರು.

ಇದಕ್ಕೆ ಪ್ರತಿಯಾಗಿ, ಅಂಜುಮನ್ ಇಂತೇಜಾಮಿಯಾ ಮಸೀದಿ ಕಮಿಟಿ ಮತ್ತು ಉತ್ತರ ಪ್ರದೇಶದ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್‌, 1991ರ ಧಾರ್ಮಿಕ ಪೂಜಾ ಸ್ಥಳಗಳ ಕಾಯ್ದೆಯಡಿ ಈ ಮೊಕದ್ದಮೆಯನ್ನು ನಿರ್ಬಂಧಿಸಬಹುದಾಗಿದೆ ಎಂದು ವಾದಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.