ಲಖನೌ: ಜ್ಞಾನವಾಪಿ ಮಸೀದಿ ಪ್ರಕರಣ ಕುರಿತ ಅರ್ಜಿಗಳ ವಿಚಾರಣೆಗೆ ಸಂಬಂಧಿಸಿದಂತೆ, ಮೊದಲಿಗೆ ಮಸೀದಿ ಸಮಿತಿಯ ಪರ ವಕೀಲರ ವಾದವನ್ನು ಮೇ 26ರಂದು ಆಲಿಸಲಾಗುವುದು ಎಂದು ವಾರಾಣಸಿಯ ಜಿಲ್ಲಾ ನ್ಯಾಯಾಲಯ ಮಂಗಳವಾರ ಪ್ರಕಟಿಸಿತು.
ಅಲ್ಲದೇ, ಜ್ಞಾನವಾಪಿ ಮಸೀದಿ ಕುರಿತು ಅಡ್ವೋಕೇಟ್ ಕಮಿಷನರ್ ಅವರು ಕೋರ್ಟ್‌ಗೆ ಸಲ್ಲಿಸಿರುವ ಸಮೀಕ್ಷೆ ವರದಿ ಕುರಿತಂತೆ ಆಕ್ಷೇಪಗಳಿದ್ದಲ್ಲಿ ಒಂದು ವಾರದೊಳಗೆ ಸಲ್ಲಿಸಬೇಕು ಎಂದೂ ಇದೇ ಸಂದರ್ಭದಲ್ಲಿ ಹಿಂದೂ ಮತ್ತು ಮುಸ್ಲಿಂ ಅರ್ಜಿದಾರರಿಗೆ ಸೂಚಿಸಿತು.
ಮಸೀದಿಯ ಸ್ಥಳವು ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಸೇರಿದ್ದಾಗಿದೆ. ಮಸೀದಿ ತೆರವುಗೊಳಿಸಬೇಕು ಎಂದು ಕೋರಿ ಹಿಂದೂಪರ ಅರ್ಜಿದಾರರು ದಾಖಲಿಸಿರುವ ಸಿವಿಲ್ ದಾವೆಯನ್ನು ವಜಾ ಮಾಡಬೇಕು ಎಂದು ಮಸೀದಿ ಸಮಿತಿಯ ಪರವಾಗಿ ವಕೀಲರು ಅರ್ಜಿ ಸಲ್ಲಿಸಿದ್ದಾರೆ.
ಮಸೀದಿಯ ಒಳಾವರಣದಲ್ಲಿ ‘ಶಿವಲಿಂಗ’ ಇದೆ. ಹೀಗಾಗಿ, ಅಲ್ಲಿ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಇಲ್ಲದಿದ್ದರೆ, ಅದು ‘ಪ್ರಾರ್ಥನಾ ಸ್ಥಳಗಳ ಕಾಯ್ದೆ 1991’ರ ಉಲ್ಲಂಘನೆಯಾಗಲಿದೆ ಎಂದೂ ಹಿಂದೂ ಪರ ಅರ್ಜಿದಾರರು ವಾದಿಸಿದ್ದರು.
‘ವಿಚಾರಣೆ ಕುರಿತು ತೀರ್ಮಾನಿಸುವ ಮುನ್ನ ಮಸೀದಿಯಲ್ಲಿ ಈಚೆಗೆ ನಡೆದಿದ್ದ ವಿಡಿಯೊ ಸಮೀಕ್ಷೆಯ ವರದಿ ಗಮನಿಸಬೇಕು. ಮಸೀದಿಯಲ್ಲಿ ‘ಶಿವಲಿಂಗ’ ಪತ್ತೆಯಾಗಿದೆ. ಆ ನೀರನ್ನೇ ಮುಸ್ಲಿಂರು ‘ವುಜು’ಗಾಗಿ (ಪ್ರಾರ್ಥನೆಗೆ ಮುನ್ನ ಕಾಲು ತೊಳೆಯಲು) ಬಳಸುತ್ತಿದ್ದಾರೆಎಂದು ಕೋರಿದ್ದರು.
ಸೋಮವಾರ ಉಭಯ ಬಣಗಳ ಪರ ವಕೀಲರ ವಾದವನ್ನು ಆಲಿಸಿದ್ದ ಜಿಲ್ಲಾ ಕೋರ್ಟ್‌ನ ನ್ಯಾಯಾಧೀಶ ಅಜಯ್ ಕೃಷ್ಣ ವಿಶ್ವೇಶ್ ಅವರು ತೀರ್ಪು ಕಾಯ್ದಿರಿಸಿದ್ದರು. ಯಾರ ಅರ್ಜಿಯನ್ನು ಮೊದಲು ವಿಚಾರಣೆಗೆ ಪರಿಗಣಿಸಬೇಕು ಎಂಬುದನ್ನು ಗುರುವಾರ ಪ್ರಕಟಿಸಲಾಗುವುದು ಎಂದು ತಿಳಿಸಿದ್ದರು.
ಈ ಮೊದಲು ಪ್ರಕರಣವನ್ನು ಜಿಲ್ಲಾ ಕೋರ್ಟ್‌ಗೆ ವರ್ಗಾಯಿಸಿದ್ದ ಸುಪ್ರೀಂ ಕೋರ್ಟ್, ಹಿರಿಯ ನ್ಯಾಯಾಧೀಶರು ವಿಚಾರಣೆ ನಡೆಸಬೇಕು ಎಂದು ತಿಳಿಸಿತ್ತು. ಅಲ್ಲದೆ, ಮಸೀದಿ ಒಳಗೆ ಪ್ರಾರ್ಥನೆ ಮಾಡಲು ಮುಸಲ್ಮಾನರಿಗೆ ಅವಕಾಶ ಕಲ್ಪಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.