ವಾರಾಣಸಿ: ಇಲ್ಲಿನ ಕಾಶಿ ವಿಶ್ವನಾಥ ಮಂದಿರದ ಸಮೀಪವಿರುವ ಜ್ಞಾನವಾಪಿ ಮಸೀದಿ ಆವರಣದಲ್ಲಿ ಕಳೆದ 3 ದಿನಗಳಿಂದ ನಡೆದ ವಿಡಿಯೊ ಸಮೀಕ್ಷೆ ಮುಕ್ತಾಯಗೊಂಡಿದೆ.
ಇಂದು ಬೆಳಗ್ಗೆ 8 ಗಂಟೆಗೆ ಆರಂಭವಾದ ಸಮೀಕ್ಷೆ 10 ಗಂಟೆ ವೇಳೆಗೆ ಮುಕ್ತಾಯಗೊಂಡಿದೆ. ನ್ಯಾಯಾಲಯ ನೇಮಕ ಮಾಡಿರುವ ಸಮಿತಿ ಮೇಲ್ವಿಚಾರಣೆಯಲ್ಲಿ ಈ ಸಮೀಕ್ಷೆ ನಡೆದಿದ್ದು, ಭಾರಿ ಭದ್ರತೆ ಕೈಗೊಳ್ಳಲಾಗಿತ್ತು.
‘ಎರಡು ಗಂಟೆಗಳ ವಿಡಿಯೊ ಸಮೀಕ್ಷೆ ಬಳಿಕ ನ್ಯಾಯಾಲಯ ನೇಮಿಸಿರುವ ಸಮಿತಿ 10.15ಕ್ಕೆ ಸಮೀಕ್ಷೆ ಮುಗಿಸಿದೆ. ಸಮಿತಿಯ ಕಾರ್ಯವೈಖರಿ ಬಗ್ಗೆ ಎರಡೂ ಕಡೆಯವರು ತೃಪ್ತಿ ವ್ಯಕ್ತಪಡಿಸಿದ್ದಾರೆ’ ಎಂದು ವಾರಾಣಸಿಯ ಜಿಲ್ಲಾಧಿಕಾರಿ ಕೌಶಲ್ ರಾಜ್ ಶರ್ಮಾ ತಿಳಿಸಿದ್ದಾರೆ.
ನ್ಯಾಯಾಲಯ ನೇಮಕ ಮಾಡಿರುವ ಕಮೀಷನರ್‌ಗೆ ಮಸೀದಿಯ ಒಳಗಡೆ ವಿಡಿಯೊ ಸಮೀಕ್ಷೆಗೆ ಅವಕಾಶವಿಲ್ಲ ಎಂದು ಮಸೀದಿ ನಿರ್ವಹಣಾ ಮಂಡಳಿ ಆಕ್ಷೇಪ ಎತ್ತಿದ್ದರಿಂದ ಕಳೆದ ವಾರ ಸಮೀಕ್ಷೆ ನಿಲ್ಲಿಸಲಾಗಿತ್ತು.
ಗುರುವಾರ ಈ ಕುರಿತಂತೆ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯವು ಕಮೀಷನರ್ ಬದಲಾವಣೆಗೆ ನಿರಾಕರಿಸಿತ್ತು. ಅಲ್ಲದೆ, ಇಬ್ಬರು ಉಪ ಕಮೀಷನರ್‌ಗಳನ್ನು ನೇಮಕ ಮಾಡಿ ಸಮೀಕ್ಷೆ ಮುಂದುವರಿಸಲು ಆದೇಶಿಸಿತ್ತು.
ಶೃಂಗಾರ್ ಗೌರಿ ಆವರಣದಲ್ಲಿರುವ ನೆಲಮಾಳಿಗೆಗಳ ಬಾಗಿಲು ತೆರೆಯಲು ಕೀ ಸಿಗದಿದ್ದರೆ ಬೀಗಗಳನ್ನು ಒಡೆಯುವಂತೆಯೂ ನ್ಯಾಯಾಲಯ ಸೂಚಿಸಿತ್ತು.
ಹಿನ್ನೆಲೆ
ವಾರಣಾಸಿಯ ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ಸದ್ಯ ಕಾನೂನು ಹೋರಾಟದ ಕೇಂದ್ರಬಿಂದುವಾಗಿದೆ. ವಾರಾಣಾಸಿಯ ನ್ಯಾಯಾಲಯವು ಜ್ಞಾನವಾಪಿ ಮಸೀದಿಯ ರಚನೆಯ ಬಗ್ಗೆ ತನಿಖೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ನಿರ್ದೇಶಿಸಿತ್ತು.
ಮಸೀದಿ ಸಂಕೀರ್ಣದಲ್ಲಿ ಹಿಂದೂ ಪೂಜಾ ಚಿಹ್ನೆಗಳು, ಗೋಡೆಗಳ ಮೇಲೆ ಹಿಂದೂ ದೇವರ ವಿಗ್ರಹಗಳು ಇವೆ ಎಂಬ ಹೇಳಿಕೆಗಳ ಹಿಂದಿನ ಸತ್ಯವನ್ನು ಕಂಡುಹಿಡಿಯಲು ಸಮೀಕ್ಷೆಗೆ ಆದೇಶಿಸಲಾಗಿತ್ತು.
ಮಸೀದಿ ಹೊರಗಿನ ಗೋಡೆಗಳ ಮೇಲಿನ ಹಿಂದೂ ದೇವತೆಗಳ ವಿಗ್ರಹಗಳ ಮುಂದೆ ದೈನಂದಿನ ಪ್ರಾರ್ಥನೆಗೆ ಅನುಮತಿ ಕೋರಿ ದೆಹಲಿ ಮೂಲದ ಮಹಿಳೆಯರಾದ ರಾಖಿ ಸಿಂಗ್, ಲಕ್ಷ್ಮಿ ದೇವಿ, ಸೀತಾ ಸಾಹು ಮತ್ತು ಇತರರು ಏಪ್ರಿಲ್ 18, 2021 ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಗ್ರಹಗಳಿಗೆ ಯಾವುದೇ ಹಾನಿ ಮಾಡದಂತೆ ರಕ್ಷಣೆ ಒದಗಿಸುವಂತೆಯೂ ಕೋರಿದ್ದರು.
ಇದನ್ನೂ ಓದಿ..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.