ADVERTISEMENT

ಜ್ಞಾನವಾಪಿ ಮಸೀದಿ: ಶಿವಲಿಂಗದ ಕಾರ್ಬನ್‌ ಡೇಟಿಂಗ್‌ ಪರೀಕ್ಷೆ: ಅ.11ಕ್ಕೆ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 16:01 IST
Last Updated 7 ಅಕ್ಟೋಬರ್ 2022, 16:01 IST
ಜ್ಞಾನವಾಪಿ ಮಸೀದಿ
ಜ್ಞಾನವಾಪಿ ಮಸೀದಿ   

ಲಖನೌ (ಪಿಟಿಐ): ಜ್ಞಾನವಾಪಿ ಮಸೀದಿ ಒಳಗೆ ಇದೆ ಎನ್ನಲಾದ ಶಿವಲಿಂಗವನ್ನು ಕಾರ್ಬನ್‌ ಡೇಟಿಂಗ್‌ ಪರೀಕ್ಷೆಗೆ (ವೈಜ್ಞಾನಿಕ ಪರೀಕ್ಷೆ) ಒಳಪಡಿಸಬೇಕು ಎಂದು ಕೋರಿ ಹಿಂದೂ ಮಹಿಳೆಯರು ಸಲ್ಲಿಸಿರುವ ಅರ್ಜಿಯ ವಿಚಾರಣೆಯುಅಕ್ಟೋಬರ್‌ 11ಕ್ಕೆ ನಿಗದಿ ಆಗಿದೆ. ಈ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಅಂದೇ ದಾಖಲಿಸುವಂತೆ ಜ್ಞಾನವಾಪಿ ಮಸೀದಿ ಆಡಳಿತಕ್ಕೆ ಇಲ್ಲಿಯ ನ್ಯಾಯಾಲಯವು ಶುಕ್ರವಾರ ಹೇಳಿದೆ.

ಮೇ 16ರಂದು ಜ್ಞಾನವಾಪಿ ಮಸೀದಿಯ ಆವರಣದೊಳಗೆ ವಿಡಿಯೊ ಸಮೀಕ್ಷೆ ನಡೆಸಲಾಗಿತ್ತು. ‘ವಝೂಖಾನ’ ಕೊಳದಲ್ಲಿ ಶಿವಲಿಂಗದ ಆಕೃತಿ ಪತ್ತೆಯಾಗಿದೆ ಎಂದು ಆಗ ಹೇಳಲಾಗಿತ್ತು. ಆ ಆಕೃತಿಯನ್ನು ಕಾರ್ಬನ್‌ ಡೇಟಿಂಗ್‌ಗೆ ಒಳಪಡಿಸಬೇಕು ಎಂದು ಜ್ಞಾನವಾಪಿ– ಶೃಂಗಾರ ಗೌರಿ ಮೊಕದ್ದಮೆಯ ಹಿಂದೂ ಪರ ಅರ್ಜಿದಾರರು ಅರ್ಜಿ ಸಲ್ಲಿಸಿದ್ದಾರೆ.

ಶಿವಲಿಂಗವನ್ನು ಕಾರ್ಬನ್‌ ಡೇಟಿಂಗ್‌ಗೆ ಒಳಪಡಿಸುವಂತೆ ಆದೇಶ ನೀಡಬೇಕೇ ಅಥವಾ ಶಿವಲಿಂಗವನ್ನು ಈ ಮೊಕದ್ದಮೆಯ ಭಾಗವನ್ನಾಗಿಸಬೇಕೇ ಎಂದು ನ್ಯಾಯಾಲಯವು ಸ್ಪಷ್ಟನೆ ಕೇಳಿದೆ ಎಂದು ಹಿಂದೂ ಅರ್ಜಿದಾರರ ಪರ ವಕೀಲ ವಿಷ್ಣು ಶಂಕರ್‌ ಜೈನ್‌ ಅವರು ತಿಳಿಸಿದ್ದಾರೆ.

ADVERTISEMENT

ವಿಡಿಯೊ ಸಮೀಕ್ಷೆಯಲ್ಲಿ ಕಂಡುಬಂದಿರುವ ಆಕೃತಿಯು ಕಾರಂಜಿ ಎಂದು ಮಸೀದಿ ಆಡಳಿತವು ಲಿಖಿತ ಹೇಳಿಕೆ ನೀಡಿತ್ತು. ಅದು ಶಿವಲಿಂಗವೊ ಅಥವಾ ಕಾರಂಜಿಯೊ ಎಂದು ತಿಳಿಯಬೇಕಿದೆ. ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣೆಯು ಈ ಆಕೃತಿಯ ಪರಿಶೀಲನೆ ನಡೆಸಬೇಕು. ಅದಕ್ಕಾಗಿ ಕೋರ್ಟ್‌ ಆಯೋಗವನ್ನು ರಚಿಸಬೇಕು ಎಂದು ಅವರು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಂಜುಮನ್‌ ಇಂತೆಝಾಮಿಯಾ ಸಮಿತಿಯ ಜಂಟಿ ಕಾರ್ಯದರ್ಶಿ ಮೊಹಮದ್‌ ಯಾಸಿನ್‌, ಕಾರ್ಬನ್‌ ಡೇಟಿಂಗ್‌ ಕುರಿತ ತೀರ್ಪನ್ನು ನ್ಯಾಯಾಲಯವು ಶುಕ್ರವಾರ ನೀಡಲಿದೆ ಎಂದು ಭಾವಿಸಿದ್ದೆವು. ಆದರೆ, ಮುಂದಿನ ವಿಚಾರಣೆಯನ್ನು ಅಕ್ಟೋಬರ್‌ 11ಕ್ಕೆ ಮೂಂದೂಡಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.