ADVERTISEMENT

ಜ್ಞಾನವಾಪಿ: ಮುಸ್ಲಿಂ ಅರ್ಜಿದಾರರಿಗೆ ನೋಟಿಸ್‌

‘ಶಿವಲಿಂಗ’ ಪತ್ತೆಯಾಗಿದ್ದ ಸ್ಥಳದಲ್ಲಿ ಎಎಸ್‌ಐ ಸಮೀಕ್ಷೆ ಕೋರಿದ್ದ ಅರ್ಜಿಯ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 16:24 IST
Last Updated 22 ನವೆಂಬರ್ 2024, 16:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಜ್ಞಾನವಾಪಿ ಮಸೀದಿಯಲ್ಲಿ ‘ಶಿವಲಿಂಗ’ ಪತ್ತೆಯಾಗಿದ್ದ ಕಡೆ ಎಎಸ್‌‌ಐ ಸಮೀಕ್ಷೆ ನಡೆಸಲು ಕೋರಿದ್ದ ಹಿಂದೂ ಪರ ಅರ್ಜಿದಾರರ ಅರ್ಜಿ ಕುರಿತು ಪ್ರತಿಕ್ರಿಯೆ ದಾಖಲಿಸುವಂತೆ ಸೂಚಿಸಿ ಮಸೀದಿಯ ಮೇಲ್ವಿಚಾರಣೆ ಸಮಿತಿಗೆ ಸುಪ್ರೀಂ ನೋಟಿಸ್ ಜಾರಿ ಮಾಡಿದೆ. 

ಕೋರ್ಟ್‌ನ ನಿರ್ದೇಶನದಂತೆ ಹಿಂದೆ ಸಮೀಕ್ಷೆ ವೇಳೇ ಮಸೀದಿ ಕೊಳದಲ್ಲಿ ಶಿವಲಿಂಗ ಕಂಡು ಬಂದಿತ್ತು. ಆ ಆವರಣವನ್ನು ಸುಪರ್ದಿಗೆ ಪಡೆದು ಪ್ರವೇಶಕ್ಕೆ ನಿರ್ಬಂಧ ಹೇರಲು ಕೋರ್ಟ್ ಹಿಂದೆ ಆದೇಶಿಸಿತ್ತು. ಮುಸ್ಲಿಂ ಅರ್ಜಿದಾರರು ‘ಅದು ಕಾರಂಜಿ’ ಎಂದು ವಾದಿಸಿದ್ದರು.  

ಸಮೀಕ್ಷೆ ಕೋರಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್‌ ಭುಯನ್ ಅವರಿದ್ದ ಪೀಠವು ಡಿಸೆಂಬರ್ 17ರ ಒಳಗೆ ಪ್ರತಿಕ್ರಿಯಿಸುವಂತೆ ಮಸೀದಿ ಮೇಲ್ವಿಚಾರಣೆಯ ಅಂಜುಮನ್‌ ಇಂತೆಜಾಮೀಯಾ ಮಸೀದಿ ಸಮಿತಿಗೆ ಸೂಚಿಸಿತು.

ADVERTISEMENT

ಶಿವಲಿಂಗ ಪತ್ತೆಯಾಗಿರುವ ಸ್ಥಳ ಹೊರತುಪಡಿಸಿ, ಸುತ್ತಲಿನ ಜಾಗದಲ್ಲಿ ಈಗಾಗಲೇ ಸಮೀಕ್ಷೆ ಪೂರ್ಣವಾಗಿದೆ ಎಂದು ಹಿಂದೂ ಪರ ಅರ್ಜಿದಾರರು ಕೋರ್ಟ್‌ನ ಗಮನಕ್ಕೆ ತಂದರು.

ಇದೇ ವೇಳೆ ವಾರಾಣಸಿಯ ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಎಲ್ಲ ಅರ್ಜಿಗಳನ್ನು ಒಟ್ಟುಗೂಡಿಸಿ ವಿಚಾರಣೆ ನಡೆ ನಡೆಸಬೇಕು ಎಂಬ ಹಿಂದೂ ಪರ ಅರ್ಜಿದಾರರ ಮನವಿಯನ್ನು ಕೋರ್ಟ್‌ ಪುರಸ್ಕರಿಸಿತು.

ಪ್ರಮುಖ ಅರ್ಜಿ ಇರುವ ಜಿಲ್ಲಾ ನ್ಯಾಯಾಧೀಶರ ಎದುರೇ ಈ ಎಲ್ಲ ಅರ್ಜಿಗಳ ಒಟ್ಟುಗೂಡಿಸಿ ವಿಚಾರಣೆ ನಡೆಯಬೇಕು. ತದನಂತರ ಸಾಕ್ಷ್ಯಗಳ ವಿಚಾರಣೆಗೆ ಹೈಕೋರ್ಟ್ ಪ್ರಥಮ ಸಕ್ಷಮ ವೇದಿಕೆಯಾಗಿದೆ ಎಂದು ಪೀಠ ಹೇಳಿತು.

ಜಪ್ತಿ ಮಾಡಿದ ಸ್ಥಳದಲ್ಲಿ ಎಎಸ್ಐ ಸಮೀಕ್ಷೆ ನಡೆಸುವುದು ಹಾಗೂ ಅರ್ಜಿಗಳ ಯಥಾಸ್ಥಿತಿ ಕಾಯ್ದುಕೊಳ್ಳುವುದು ಸೇರಿದಂತೆ ವಿವಿಧ ಅರ್ಜಿಗಳನ್ನು ಪ್ರತಿ 15 ದಿನಗಳಿಗೊಮ್ಮೆ ವಿಚಾರಣೆ ನಡೆಸಲು ಪೀಠ ತೀರ್ಮಾನಿಸಿತು. ಮುಂದಿನ ತಿಂಗಳು ವಿಚಾರಣೆ ಮುಂದುವರಿಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.