ADVERTISEMENT

ಜ್ಞಾನವಾಪಿ ಮಸೀದಿ ವಿಡಿಯೊ ಸಮೀಕ್ಷೆ: ಗುರುವಾರ ಆದೇಶ ನೀಡಲಿರುವ ವಾರಾಣಸಿ ಕೋರ್ಟ್

ಪಿಟಿಐ
Published 11 ಮೇ 2022, 15:34 IST
Last Updated 11 ಮೇ 2022, 15:34 IST
ಜ್ಞಾನವಾಪಿ ಮಸೀದಿ
ಜ್ಞಾನವಾಪಿ ಮಸೀದಿ   

ವಾರಾಣಸಿ: ಇಲ್ಲಿನ ಕಾಶಿ ವಿಶ್ವನಾಥ ಮಂದಿರಕ್ಕೆ ಹೊಂದಿಕೊಂಡಿರುವ ಜ್ಞಾನವಾಪಿ ಮಸೀದಿಯ ವಿಡಿಯೊ ಸಮೀಕ್ಷೆ ಕುರಿತ ಆದೇಶವನ್ನು ವಾರಾಣಸಿಯ ಜಿಲ್ಲಾ ನ್ಯಾಯಾಲಯವು ಗುರುವಾರ ಹೊರಡಿಸಲಿದೆ.

ಇದೇವೇಳೆ, ಸಮೀಕ್ಷೆಗಾಗಿ ನ್ಯಾಯಾಲಯದ ಕಮಿಷನರ್‌ ಆಗಿ ನೇಮಿಸಲಾಗಿರುವ ಅಜಯ್ ಕುಮಾರ್ ಮಿಶ್ರಾ ಅವರನ್ನು ತೆಗೆದುಹಾಕುವಂತೆ ಕೋರಿ ಜ್ಞಾನವಾಪಿ ಮಸೀದಿ ಆಡಳಿತ ಸಮಿತಿ (ಅಂಜುಮನ್ ಇಂತೇಝಾಮಿಯಾ ಮಸೀದಿ) ಸಲ್ಲಿಸಿರುವ ಮನವಿಯ ಕುರಿತಂತೆಯೂ ನ್ಯಾಯಾಲಯವು ನಿರ್ಧರಿಸುತ್ತದೆ ಎಂದು ವಕೀಲರು ತಿಳಿಸಿದ್ದಾರೆ.

ಈ ಹಿಂದೆ ಹಿಂದೂ ಮತ್ತು ಮುಸ್ಲಿಂ ಪರ ವಾದವನ್ನು ಆಲಿಸಿದ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ (ಹಿರಿಯ ವಿಭಾಗ) ರವಿಕುಮಾರ್ ದಿವಾಕರ್, ಜ್ಞಾನವಾಪಿ ಸಂಕೀರ್ಣದ ಬ್ಯಾರಿಕೇಡ್‌ ಒಳಗಿರುವ ಎರಡು ನೆಲಮಾಳಿಗೆಗಳನ್ನು ವಿಡಿಯೊಗ್ರಫಿಗಾಗಿ ತೆರೆಯುವ ಮತ್ತು ಕಮೀಷನರ್ ಬದಲಾವಣೆಗೆ ಸಂಬಂಧಿಸಿದ ವಾದವನ್ನೂ ಆಲಿಸಿದರು.

ADVERTISEMENT

‘ನ್ಯಾಯಾಲಯವು ತನ್ನ ಆದೇಶವನ್ನು ನಾಳೆ(ಗುರುವಾರ) 12 ಗಂಟೆಗೆ ಕಾಯ್ದಿರಿಸಿದೆ. ನಾಳೆ ನ್ಯಾಯಾಲಯವು ವಿಡಿಯೊಗ್ರಫಿಗೆ ದಿನಾಂಕ ನಿಗದಿ ಮಾಡಬಹುದು ಮತ್ತು ಆಯುಕ್ತರನ್ನು ಬದಲಾಯಿಸಬೇಕೆ ಅಥವಾ ಬೇಡವೇ ಎಂಬುದರ ಕುರಿತು ತೀರ್ಪು ನೀಡುವ ನಿರೀಕ್ಷೆಯಿದೆ’ ಎಂದು ಗೌರ್ ಹೇಳಿದರು.

ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯ ತನ್ನ ತೀರ್ಪನ್ನು ಗುರುವಾರಕ್ಕೆ ಕಾಯ್ದಿರಿಸಿದೆ ಎಂದು ಸರ್ಕಾರಿ ವಕೀಲ ಮಹೇಂದ್ರ ಪ್ರಸಾದ್ ಪಾಂಡೆ ತಿಳಿಸಿದ್ದಾರೆ.

ಏತನ್ಮಧ್ಯೆ, ಜ್ಞಾನವಾಪಿ ಮಸೀದಿಯ ಸುತ್ತಲೂ ಬ್ಯಾರಿಕೇಡ್‌ಗಳಿದ್ದು, ಮಸೀದಿಯ ಕೆಳಗಿರುವ ಎರಡು ನೆಲಮಾಳಿಗೆಗಳನ್ನು ತೆರೆಯುವ ಮೂಲಕ ವಿಡಿಯೊಗ್ರಫಿ ಮಾಡುವ ಬಗ್ಗೆ ಹಿಂದೂಗಳು ಮಾತನಾಡುತ್ತಿದ್ದಾರೆ ಎಂದು ಅಂಜುಮನ್ ಇಂತಜಾಮಿಯಾ ಮಸೀದಿಯ ಜಂಟಿ ಕಾರ್ಯದರ್ಶಿ ಸೈಯದ್ ಮೊಹಮ್ಮದ್ ಯಾಸಿನ್ ಪಿಟಿಐಗೆ ತಿಳಿಸಿದ್ದಾರೆ. ಏಪ್ರಿಲ್ 26 ರಂದು ನ್ಯಾಯಾಲಯ ಹೊರಡಿಸಿದ ವಿಡಿಯೊಗ್ರಫಿ–ಸರ್ವೆ ಆದೇಶದಲ್ಲಿ ಬ್ಯಾರಿಕೇಡಿಂಗ್ ಒಳಗೆ ಹೋಗಿ ವಿಡಿಯೊಗ್ರಫಿ ವಿಷಯವೂ ಸೇರಿದೆ ಎಂದು ಗೌರ್ ಪ್ರತಿಪಾದಿಸಿದ್ದಾರೆ.

ಹಿನ್ನೆಲೆ

ಜ್ಞಾನವಾಪಿ ಮಸೀದಿಯ ಹೊರಗಿನ ಗೋಡೆ ಮೇಲಿರುವ ಶೃಂಗಾರ್ ಗೌರಿ, ಗಣೇಶ, ಹನುಮಾನ್ ಮತ್ತು ನಂದಿ ವಿಗ್ರಹಗಳಿಗೆ ಪ್ರತಿನಿತ್ಯ ಪೂಜೆ ಮಾಡಲು ಅನುಮತಿ ಕೋರಿ ದೆಹಲಿಯ ಮಹಿಳೆಯರಾದ ರಾಖಿ ಸಿಂಗ್, ಲಕ್ಷ್ಮಿ ದೇವಿ, ಸೀತಾ ಸಾಹು ಮತ್ತು ಇತರರು ಸಲ್ಲಿಸಿದ ಮನವಿಯ ಮೇರೆಗೆ ನ್ಯಾಯಾಧೀಶ ದಿವಾಕರ್ ಅವರು ಮಸೀದಿಯ ವಿಡಿಯೊಗ್ರಫಿ ಮತ್ತು ಸಮೀಕ್ಷೆಗೆ ಆದೇಶಿಸಿದ್ದರು.

ಏಪ್ರಿಲ್ 18, 2021ರಂದು ನ್ಯಾಯಾಲಯದ ಮೆಟ್ಟಿಲೇರಿದ್ದ ಮಹಿಳೆಯರು ಮಸೀದಿ ಗೊಡೆ ಮೇಲಿರುವ ವಿಗ್ರಹಗಳಿಗೆ ಯಾವುದೇ ಹಾನಿ ಮಾಡದಂತೆ ತಡೆಯಲು ನ್ಯಾಯಾಲಯದ ಆದೇಶವನ್ನು ಕೋರಿದ್ದರು.

ಆದರೆ, ಮಸೀದಿಯೊಳಗೆ ವಿಡಿಯೊಗ್ರಫಿ ಮಾಡಲು ನ್ಯಾಯಾಲಯವು ಯಾವುದೇ ಆದೇಶವನ್ನು ನೀಡಿಲ್ಲ. ಮಸೀದಿ ಪ್ರದೇಶವನ್ನು ಸುತ್ತುವರಿದ ಬ್ಯಾರಿಕೇಡ್‌ಗಳ ಹೊರಗೆ 'ಚಬುತ್ರ' (ಅಂಗಣ)ವರೆಗೆ ಮಾತ್ರ ಸಮೀಕ್ಷೆ ಮಾಡಬೇಕೆಂದು ಮಸೀದಿ ಆಡಳಿತ ಸಮಿತಿಯ ವಕೀಲರು ಈ ಹಿಂದೆ ವಾದಿಸಿದ್ದರು.

ನ್ಯಾಯಾಲಯದ ಆಯುಕ್ತರು ಶುಕ್ರವಾರ ಜ್ಞಾನವಾಪಿ-ಶೃಂಗಾರ್ ಗೌರಿ ಸಂಕೀರ್ಣದಲ್ಲಿರುವ ಮಸೀದಿಯ ಹೊರಗಿನ ಕೆಲವು ಪ್ರದೇಶಗಳಲ್ಲಿ ಎರಡು ಕಡೆಯವರ ಘೋಷಣೆಗಳ ನಡುವೆ ಅನಿರ್ದಿಷ್ಟ ಸಮೀಕ್ಷೆಯನ್ನು ನಡೆಸಿದ್ದರು. ಈ ವೇಳೆ, ನ್ಯಾಯಾಲಯದಿಂದ ನೇಮಕಗೊಂಡ ಕಮಿಷನರ್ ಪಕ್ಷಪಾತದಿಂದ ವರ್ತಿಸುತ್ತಿದ್ದಾರೆ ಎಂದು ಮುಸ್ಲಿಂ ಕಡೆಯವರು ಆರೋಪಿಸಿದ್ದರು. ಕೋರ್ಟ್ ಆದೇಶವಿಲ್ಲದೆ ಅವರು ಜ್ಞಾನವಾಪಿ ಮಸೀದಿಯೊಳಗೆ ವಿಡಿಯೋಗ್ರಫಿ ಮಾಡಲು ಪ್ರಯತ್ನಿಸಿದ್ದಾರೆ ಎಂದು ದೂರಿದ್ದು, ಅವರನ್ನು ಬದಲಾಯಿಸುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.