ಕೋಲ್ಕತ್ತ: ಭ್ರಷ್ಟಾಚಾರದ ವಿರುದ್ಧ ಹೋರಾಡುವುದಾಗಿ ಹೇಳುವ ಬಿಜೆಪಿ ಕರ್ನಾಟಕದಲ್ಲಿ ಶಾಸಕರ ಖರೀದಿಯಲ್ಲಿ ತೊಡಗಿದೆ. ಇದು ಬಿಜೆಪಿಯ ದಂದ್ವ ನೀತಿಯನ್ನು ತೋರಿಸುತ್ತದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹರಿಹಾಯ್ದರು.
ಪ್ರಜಾಪ್ರಭುತ್ವ ವ್ಯವಸ್ಥೆ ಅಂಕಿ–ಸಂಖ್ಯೆಗಳ ಆಟದ ಮಟ್ಟಕ್ಕೆ ಇಳಿದಿರುವುದು ವಿಪರ್ಯಾಸದ ಸಂಗತಿ. ಜನಪ್ರತಿನಿಧಿಗಳು ಮಾರಾಟದ ವಸ್ತುಗಳಾಗಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಇದನ್ನೂ ಓದಿ:ಜಾತ್ಯತೀತ ಮೌಲ್ಯಗಳ ಮರುಸ್ಥಾಪನೆ: ಖರ್ಗೆ
‘ನಮ್ಮದು ವಿಶ್ವದ ಎರಡನೇ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ರಾಷ್ಟ್ರ ಎಂದು ಹೆಮ್ಮೆಯಿಂದ ಬೀಗುತ್ತೇವೆ. ವಿಪರ್ಯಾಸವೆಂದರೆ, ಕೇಂದ್ರ ಸರ್ಕಾರವನ್ನು ಪ್ರಜಾತಂತ್ರ ವಿರೋಧಿ ವ್ಯಕ್ತಿ ಮತ್ತು ಶಕ್ತಿಗಳು ಆಳುತ್ತಿವೆ’ ಎಂದು ಕುಮಾರಸ್ವಾಮಿ ಅವರು ಪರೋಕ್ಷವಾಗಿ ಮೋದಿ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ವಿವಿಧತೆಯಲ್ಲಿ ಏಕತೆ, ಬಹು ಸಂಸ್ಕೃತಿ ನಮ್ಮ ದೇಶದ ಅಂತಃಶಕ್ತಿ. ಆದರೆ, ಇಂದು ಅದೇ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಅಪಾಯದಲ್ಲಿವೆ. ಸದ್ಯ ಕೇಂದ್ರದಲ್ಲಿರುವ ಸರ್ಕಾರದಿಂದ ಸಂವಿಧಾನ ಮತ್ತು ಪ್ರಜಾತಂತ್ರ ವ್ಯವಸ್ಥೆಗೆ ಗಂಡಾಂತರ ಎದುರಾಗಿದೆ ಎಂದು ವಿಷಾದಿಸಿದರು.
ಜನಸಾಮಾನ್ಯರನೋವು, ನಲಿವುಗಳಿಗೆ ಸ್ಪಂದಿಸುವ ವ್ಯವಧಾನ ಕೇಂದ್ರ ಸರ್ಕಾರಕ್ಕಿಲ್ಲ. ರೈತರ ಕಷ್ಟ, ಕಾರ್ಪಣ್ಯಗಳು ಕಾಣುತ್ತಿಲ್ಲ. ಉದ್ಯಮಿಗಳ ಸಾಳಮನ್ನಾ ಮಾಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ರೈತರ ಸಾಲ ಕಣ್ಣಿಗೆ ಕಾಣುತ್ತಿಲ್ಲ. ಏಕೆಂದರೆ ಕೇಂದ್ರ ಸರ್ಕಾರಕ್ಕೆ ಕಣ್ಣು ಮತ್ತು ಕಿವಿ ಎರಡೂ ಇಲ್ಲ ಎಂದು ಕುಮಾಸ್ವಾಮಿ ತರಾಟೆಗೆ ತೆಗೆದುಕೊಂಡರು.
ರಾಜ್ಯ ಮತ್ತು ಜನರ ಹಿತಾಸಕ್ತಿ ಕಾಪಾಡಲು ಪ್ರಾದೇಶಿಕ ಪಕ್ಷಗಳ ಅಗತ್ಯ ಇಂದು ಹೆಚ್ಚಿದೆ ಎಂದು ಅವರು ಅಭಿಪ್ರಾಯಪಟ್ಟರು.
ತಮಿಳುನಾಡಿನಲ್ಲಿ ಎಂ. ಕರುಣಾನಿಧಿ, ಆಂಧ್ರ ಪ್ರದೇಶದಲ್ಲಿ ಎನ್. ಚಂದ್ರಬಾಬು ನಾಯ್ಡು, ಉತ್ತರ ಪ್ರದೇಶದಲ್ಲಿ ಮಾಯಾವತಿ ಮತ್ತು ಅಖಿಲೇಶ್ ಯಾದವ್ ಮತ್ತು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರು ಪ್ರಾದೇಶಿಕ ಪಕ್ಷಗಳ ಮಹತ್ವ ತಿಳಿಸಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.
ಭಿನ್ನಾಭಿಪ್ರಾಯ ಬದಿಗಿಡಿ: ದೇವೇಗೌಡ
ಬಿಜೆಪಿ ವಿರುದ್ಧದ ನಿರ್ಣಾಯಕ ಹೋರಾಟದಲ್ಲಿ ವಿರೋಧ ಪಕ್ಷಗಳು ವೈಮನಸ್ಸು ಮತ್ತು ಭಿನ್ನಾಭಿಪ್ರಾಯ ಬದಿಗಿಡಬೇಕು ಎಂದು ಮಾಜಿ ಪ್ರಧಾನಿ ಹಾಗು ಜೆಡಿಎಸ್ ನಾಯಕ ಎಚ್.ಡಿ. ದೇವೇಗೌಡ ಕಿವಿಮಾತು ಹೇಳಿದ್ದಾರೆ.
ಜಾತ್ಯತೀತ ಮೌಲ್ಯ, ಸಂವಿಧಾನ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ಹಾಳು ಮಾಡಲು ಹೊರಟಿರುವ ಮೋದಿ ನೇತೃತ್ವದ ಸರ್ಕಾರ ಬದಲಾಗಬೇಕು ಎಂದು ದೇಶದ ಜನರು ಬಯಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
‘ವಿರೋಧ ಪಕ್ಷಗಳ ನಾಯಕರು ಸ್ಥಿರ ಸರ್ಕಾರ ಕೊಡಲಿದ್ದಾರೆ. ಆ ಬಗ್ಗೆ ಯಾವ ಸಂಶಯವೂ ಬೇಡ’ ಎಂದು ದೇವೇಗೌಡ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.