ಫಿರೋಜ್‌ಪುರ: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ನರೇಂದ್ರ ಮೋದಿ ಪ್ರಧಾನಿಯಾಗಿದ್ದಿದ್ದರೆ ಕರ್ತಾರ್‌ಪುರ ಸಾಹಿಬ್ ಮತ್ತು ನಾನ್ಕಾನ ಸಾಹಿಬ್ ಭಾರತದಲ್ಲೇ ಉಳಿಯುತ್ತಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ.
ಕರ್ತಾರ್‌ಪುರ ಸಾಹಿಬ್ ಗುರುನಾನಕ ವಿಶ್ರಾಂತಿ ಸ್ಥಳವಾಗಿದ್ದರೆ, ನಾನ್ಕಾನ ಸಾಹಿಬ್ ಸಿಖ್ ಧರ್ಮದ ಸಂಸ್ಥಾಪಕರ ಜನ್ಮಸ್ಥಳ. ಈ ಎರಡೂ ಸ್ಥಳಗಳು ಈಗ ಪಾಕಿಸ್ತಾನದಲ್ಲಿವೆ.
ಕರ್ತಾರ್‌ಪುರ ಸಾಹಿಬ್ ಕಾರಿಡಾರ್ ತೆರೆಯಬೇಕೆಂಬ ಸಿಖ್ಖರ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ್ದು ಮೋದಿಯವರು ಎಂದು ಫಿರೋಜ್‌ಪುರದ ಚುನಾವಣಾ ರ‍್ಯಾಲಿಯಲ್ಲಿ ಶಾ ಹೇಳಿದರು.
4-ಕಿಮೀ ಉದ್ದದ ಕರ್ತಾರ್‌ಪುರ ಕಾರಿಡಾರ್ ಮೂಲಕ ಭಾರತೀಯ ಸಿಖ್ ಯಾತ್ರಾರ್ಥಿಗಳು ವೀಸಾ ಇಲ್ಲದೇ ಗುರುದ್ವಾರ ದರ್ಬಾರ್ ಸಾಹೀಬ್‌ಗೆ ಭೇಟಿ ನೀಡಬಹುದು. ಈ ಕಾರಿಡಾರ್ ಅನ್ನು 2019ರಲ್ಲಿ ಉದ್ಘಾಟಿಸಲಾಯಿತು.
ಬುಧವಾರ ಪಠಾಣ್‌ಕೋಟ್‌ನಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ್ದ ಮೋದಿ, ‘ವಿಭಜನೆಯ ಸಮಯದಲ್ಲಿ ಕರ್ತಾರ್‌ಪುರ ಸಾಹಿಬ್‌ಅನ್ನು ಭಾರತದಲ್ಲೇ ಉಳಿಸಿಕೊಳ್ಳಲು ವಿಫಲವಾದ ಕಾಂಗ್ರೆಸ್ ‘ಪಾಪ’ ಮಾಡಿದೆ ಎಂದು ಹೇಳಿದ್ದರು.
ಪಾಕಿಸ್ತಾನದೊಂದಿಗಿನ ಯುದ್ಧಗಳ ಸಮಯದಲ್ಲೂ ಕರ್ತಾರ್‌ಪುರ ಸಾಹಿಬ್ಅನ್ನು ಭಾರತದ ತೆಕ್ಕೆಗೆ ತೆಗೆದುಕೊಳ್ಳುವ ಅವಕಾಶ ತಪ್ಪಿ ಹೋಗಿದೆ ಎಂದು ಅವರು ಹೇಳಿದರು.
ಫೆಬ್ರವರಿ 20 ರಂದು ಪಂಜಾಬ್‌ನಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.