ADVERTISEMENT

2022ರ ಹಜ್ ಯಾತ್ರೆ: ಆನ್‌ಲೈನ್ ಅರ್ಜಿಗೆ ಚಾಲನೆ

ತೀರ್ಥಯಾತ್ರೆ ಸೌಲಭ್ಯದಲ್ಲಿ ಗಮನಾರ್ಹ ಸುಧಾರಣೆ: ನಖ್ವಿ

ಪಿಟಿಐ
Published 1 ನವೆಂಬರ್ 2021, 11:27 IST
Last Updated 1 ನವೆಂಬರ್ 2021, 11:27 IST
ಮುಖ್ತರ್ ಅಬ್ಬಾಸ್ ನಖ್ವಿ
ಮುಖ್ತರ್ ಅಬ್ಬಾಸ್ ನಖ್ವಿ   

ಮುಂಬೈ: ದಕ್ಷಿಣ ಮುಂಬೈನ ಹಜ್ ಹೌಸ್‌ನಲ್ಲಿ ಸೋಮವಾರ 2022ರ ಹಜ್ ಯಾತ್ರೆಯ ಆನ್‌ಲೈನ್ ಪ್ರಕ್ರಿಯೆಗೆ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಚಾಲನೆ ನೀಡಿದರು.

ಈ ಬಾರಿಯ ಹಜ್ ಯಾತ್ರೆ ಪ್ರಕ್ರಿಯೆಯು ಶೇ 100ರಷ್ಟು ಡಿಜಿಟಲ್/ ಆನ್‌ಲೈನ್ ಆಗಿರುತ್ತದೆ. ಯಾತ್ರೆಗೆ ಅರ್ಜಿ ಸಲ್ಲಿಸಲು 2022ರ ಜನವರಿ 31 ಕೊನೆಯ ದಿನಾಂಕ ಆಗಿರುತ್ತದೆ. ಯಾತ್ರಾರ್ಥಿಗಳು ‘ಹಜ್’ ಮೊಬೈಲ್ ಆ್ಯಪ್ ಮೂಲಕವೂ ಅರ್ಜಿ ಸಲ್ಲಿಸಬಹುದು ಎಂದು ನಖ್ವಿ ಹೇಳಿದರು.

‘ಈ ಹಿಂದೆ ಹಜ್ ಯಾತ್ರೆಗೆ ತೆರಳುತ್ತಿದ್ದ ಯಾತ್ರಾರ್ಥಿಗಳು ಸೌದಿ ಅರೇಬಿಯಾದಲ್ಲಿ ವಿದೇಶಿ ಕರೆನ್ಸಿಯಲ್ಲಿ ಬೆಡ್‌ಶೀಟ್, ತಲೆದಿಂಬು ಸೇರಿದಂತೆ ಇತರ ವಸ್ತುಗಳನ್ನು ಖರೀದಿಸುತ್ತಿದ್ದರು. ಆದರೆ, ಈ ಬಾರಿ ಈ ಸರಕುಗಳನ್ನು ಭಾರತೀಯ ಕರೆನ್ಸಿಗಳಲ್ಲಿ ಖರೀದಿಸಲಾಗುತ್ತದೆ. ಸೌದಿ ಅರೇಬಿಯಾಕ್ಕೆ ಹೋಲಿಸಿದರೆ ಈ ಸರಕುಗಳು ಈಗ ಶೇ 50ರಷ್ಟು ರಿಯಾಯ್ತಿ ದರದಲ್ಲಿ ದೊರೆಯುತ್ತವೆ’ ಎಂದೂ ನಖ್ವಿ ವಿವರಿಸಿದರು.

ADVERTISEMENT

‘ಭಾರತವು ಪ್ರತಿವರ್ಷ 2 ಲಕ್ಷ ಹಜ್ ಯಾತ್ರಿಕರನ್ನು ಕಳುಹಿಸುತ್ತದೆ. ಇದರಿಂದ ಭಾರತೀಯ ಹಜ್ ಯಾತ್ರಿಕರ ಕೋಟ್ಯಂತರ ರೂಪಾಯಿ ಉಳಿತಾಯಕ್ಕೆ ಸಹಾಯವಾಗಲಿದೆ. ಹಜ್ ಯಾತ್ರಾರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಭಾರತ ಮತ್ತು ಸೌದಿ ಅರೇಬಿಯಾ ಸರ್ಕಾರಗಳು ರೂಪಿಸಿರುವ ಕೋವಿಡ್ ನಿಯಮಾವಳಿಗಳನ್ನು ಅನುಸರಿಸಲಾಗುವುದು’ ಎಂದು ಅವರು ಹೇಳಿದರು.

2022ರ ಹಜ್ ಯಾತ್ರೆಯಲ್ಲಿ ಮಹಿಳೆಯರು ‘ಮೆಹ್ರಮ್’ ಇಲ್ಲದೆ (ಪುರುಷ ಸಹಚರ) ಅರ್ಜಿ ಸಲ್ಲಿಸಬಹುದಾಗಿದೆ. ಇದರ ಅಡಿಯಲ್ಲಿ ಅವರಿಗೆ ಲಾಟರಿ ಆಯ್ಕೆ ವ್ಯವಸ್ಥೆಯಿಂದ ವಿನಾಯ್ತಿ ನೀಡಲಾಗಿದೆ ಎಂದು ನಖ್ವಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.