ADVERTISEMENT

ಹನುಮಾನ್ ಚಾಲೀಸಾ ವಿವಾದ: ರಾಣಾ ದಂಪತಿ ವಿರುದ್ಧದ ಎಫ್‌ಐಆರ್ ವಜಾಕ್ಕೆ ಕೋರ್ಟ್ ನಕಾರ

ಪಿಟಿಐ
Published 25 ಏಪ್ರಿಲ್ 2022, 14:34 IST
Last Updated 25 ಏಪ್ರಿಲ್ 2022, 14:34 IST
ರವಿರಾಣಾ ಮತ್ತು ನವನೀತ್ ಕೌರ್ ರಾಣಾ (ಪಿಟಿಐ ಚಿತ್ರ)
ರವಿರಾಣಾ ಮತ್ತು ನವನೀತ್ ಕೌರ್ ರಾಣಾ (ಪಿಟಿಐ ಚಿತ್ರ)   

ಮುಂಬೈ: ಹನುಮಾನ್ ಚಾಲೀಸಾ ವಿವಾದಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಸಂಸದೆ ನವನೀತ್ ಕೌರ್ ರಾಣಾ ಮತ್ತು ಅವರ ಪತಿ, ಶಾಸಕ ರವಿ ರಾಣಾ ಅವರು ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.

ಪೊಲೀಸ್ ಅಧಿಕಾರಿಗೆ ತಮ್ಮ ಕರ್ತವ್ಯ ನಿರ್ವಹಿಸದಂತೆ ತಡೆದ ಆರೋಪದ ಮೇರೆಗೆ ಮುಂಬೈನ ಖಾರ್ ಪೊಲೀಸರು ರಾಣಾ ದಂಪತಿ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಇದನ್ನು ರದ್ದುಗೊಳಿಸುವಂತೆ ಕೋರಿ ದಂಪತಿ ಸೋಮವಾರ ಬೆಳಿಗ್ಗೆ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು.

ನ್ಯಾಯಮೂರ್ತಿಗಳಾದ ಪಿ.ಬಿ.ವರಾಲೆ ಮತ್ತು ಎಸ್.ಎಂ.ಮೋದಕ್ ಅವರನ್ನೊಳಗೊಂಡ ನ್ಯಾಯಪೀಠವು, ರಾಣಾ ದಂಪತಿಯ ಅರ್ಜಿಯನ್ನು ವಜಾಗೊಳಿಸಿತು.

ADVERTISEMENT

ಮುಂಬೈನಲ್ಲಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸದ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸಲಾಗುವುದು ಎಂದು ರಾಣಾ ದಂಪತಿ ಘೋಷಿಸಿದ್ದರು. ಬಳಿಕ ದಂಪತಿ ವಿರುದ್ಧ ಪೊಲೀಸರು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.

ಎರಡು ಭಿನ್ನ ಧರ್ಮಗಳ ನಡುವೆ ದ್ವೇಷವನ್ನು ಪ್ರಚೋದಿಸುವ ಆರೋಪದ ಮೇರೆಗೆ ಏ. 23ರಂದು ರಾಣಾ ದಂಪತಿ ವಿರುದ್ದಪೊಲೀಸರು ದೇಶದ್ರೋಹದ ಕಾಯ್ದೆಯಡಿ ಮೊದಲ ಎಫ್‌ಐಆರ್ ದಾಖಲಿಸಿದ್ದರು. ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ ಆರೋಪದ ಮೇರೆಗೆ ಏ. 24ರಂದು ಐಪಿಸಿ ಸೆಕ್ಷನ್ 353ರ ಅಡಿಯಲ್ಲಿ ಎರಡನೇ ಎಫ್‌ಐಆರ್ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.