ADVERTISEMENT

ರೋರಿಂಗ್ ಲಯನ್ಸ್! ರಾಷ್ಟ್ರೀಯ ಲಾಂಛನ ವಿವಾದದ ಬಗ್ಗೆ ಸಚಿವ ಪುರಿ ಸ್ಪಷ್ಟನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜುಲೈ 2022, 14:36 IST
Last Updated 12 ಜುಲೈ 2022, 14:36 IST
ಹಳೆಯ ರಾಷ್ಟ್ರೀಯ ಲಾಂಛನ
ಹಳೆಯ ರಾಷ್ಟ್ರೀಯ ಲಾಂಛನ   

ನವದೆಹಲಿ: ಸಂಸತ್ತಿನ ನಿರ್ಮಾಣ ಹಂತದಲ್ಲಿನ ನೂತನ ಸಂಕೀರ್ಣದ ಬಳಿ ಪ್ರಧಾನಿ ಮೋದಿ ಸೋಮವಾರ ಅನಾವರಣಗೊಳಿಸಿದ, ಅಶೋಕಸ್ತಂಭದ ನಾಲ್ಕು ಸಿಂಹಗಳ ಮುಖವನ್ನು ಒಳಗೊಂಡ ರಾಷ್ಟ್ರೀಯ ಲಾಂಛನದ ‘ಸ್ವರೂಪ’ ವಿವಾದಕ್ಕೆ ಕಾರಣವಾದ ನಂತರ ಕೇಂದ್ರ ಸಚಿವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, ಸೌಂದರ್ಯ ಎನ್ನುವುದು ನೋಡುಗನ ದೃಷ್ಟಿಯಲ್ಲಿದೆ, ಶಾಂತತೆ ಹಾಗೂ ಕೋಪವೂ ಕೂಡ ಹಾಗೇ.. ಅನಾವರಣಗೊಳಿಸಿರುವರಾಷ್ಟ್ರೀಯ ಲಾಂಛನ ಮೂಲ ಸಾರನಾಥ ಸಿಂಹ ಲಾಂಛನದಂತೆ ಇದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ.

ಈ ಮೂಲಕ ಅವರುರಾಷ್ಟ್ರೀಯ ಲಾಂಛನ ಬಗ್ಗೆ ವಿರೋಧ ಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. ಮೂಲ ಸಾರನಾಥ ರಾಷ್ಟ್ರೀಯ ಲಾಂಛನ 1.6 ಮೀಟರ್ ಎತ್ತರ ಇದೆ.ಸಂಸತ್ತಿನ ನಿರ್ಮಾಣ ಹಂತದಲ್ಲಿನ ನೂತನ ಸಂಕೀರ್ಣದ ಬಳಿ ಅನಾವರಣಗೊಳಿಸಿದರಾಷ್ಟ್ರೀಯ ಲಾಂಛನ 6.5 ಮೀಟರ್ ಎತ್ತರ ಇದೆ. ಇಷ್ಟೇ ವ್ಯತ್ಯಾಸ ಎಂದು ಅವರು ಟೀಕಾಕಾರರ ಬಾಯಿ ಮುಚ್ಚಿಸಲು ಪ್ರಯತ್ನಿಸಿದ್ದಾರೆ.

ADVERTISEMENT

‘ಹಿತಭಾವ, ಘನತೆ, ಆತ್ಮವಿಶ್ವಾಸದ ಪ್ರತೀಕವಾಗಿದ್ದ’ ಸಿಂಹಗಳ ಮುಖಭಾವಕ್ಕೆ ಬದಲಾಗಿ, ‘ಕೇಡುಂಟು ಮಾಡುವ, ಆಕ್ರಮಣ ಶೈಲಿ’ಯ ಮುಖಭಾವ ಇರುವಂತೆ ಲಾಂಛನವಿದೆ ಎಂದು ಪ್ರತಿಪಕ್ಷಗಳ ಸದಸ್ಯರು, ಸಾಮಾಜಿಕ ಕಾರ್ಯಕರ್ತರು ಆಕ್ಷೇಪಿಸಿದ್ದಾರೆ.

‘ಗಾಂಧಿಯಿಂದ ಗೋಡ್ಸೆವರೆಗೆ: ರಾಷ್ಟ್ರೀಯ ಲಾಂಛನದಲ್ಲಿದ್ದ ಸಿಂಹಗಳ ಭಾವವೂ ಬದಲಾಗಿದೆ. ಇದು, ಮೋದಿಯವರ ನವಭಾರತ’ ಎಂದು ವಕೀಲ ಮತ್ತು ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್‌ ಅವರು ಟ್ವೀಟ್‌ನಲ್ಲಿ ವ್ಯಂಗ್ಯವಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.