ನವದೆಹಲಿ: ಈಗಿನ ಸಂಸತ್ ಕಟ್ಟಡವು ದುರದೃಷ್ಟಕರ ಎಂಬ ಮೂಢನಂಬಿಕೆಯಿಂದ ಹೊಸದನ್ನು ನಿರ್ಮಾಣ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಬಹಿರಂಗ ಪತ್ರ ಬರೆದಿರುವ ಮಾಜಿ ಅಧಿಕಾರಿಗಳ ವಿರುದ್ಧ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರದೀಪ್ ಸಿಂಗ್ ಪುರಿ ಕೆಂಡಾಮಂಡಲವಾಗಿದ್ದಾರೆ.
ಮಾಜಿ ಅಧಿಕಾರಿಗಳ ಪತ್ರದ ಬಗ್ಗೆ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಉಲ್ಲೇಖಿಸಿದ್ದ ಪುರಿ, ಹೀಗೆ ಪತ್ರ ಬರೆದವರು ವಿದ್ಯಾವಂತ ಮೂರ್ಖರು ಮಾತ್ರವಲ್ಲ, ಅವರು ಇಡೀ ದೇಶಕ್ಕೇ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರದಲ್ಲಿರುವ ಕೆಲವು ಅಂಶಗಳನ್ನು ಉಲ್ಲೇಖಿಸಿ ಮಾಜಿ ಅಧಿಕಾರಿಗಳ ವಿರುದ್ಧ ಹರಿಹಾಯ್ದಿರುವ ವಿಡಿಯೊವನ್ನು ಸಚಿವರು ಟ್ವೀಟ್ ಮಾಡಿದ್ದಾರೆ.
‘ಸೆಂಟ್ರಲ್ ವಿಸ್ತಾ’ ಯೋಜನೆ ಬಗ್ಗೆ ಆಕ್ಷೇಪಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪುರಿ ಅವರಿಗೆ 60 ಮಂದಿ ಮಾಜಿ ಅಧಿಕಾರಿಗಳು ಬಹಿರಂಗ ಪತ್ರ ಬರೆದಿದ್ದರು. ‘ವರದಿಗಳನ್ನು ನಂಬುವುದಾದರೆ, ಈಗಿನ ಸಂಸತ್ ಭವನವು ದುರದೃಷ್ಟಕರವಾಗಿದೆ ಎಂಬ ಮೂಢನಂಬಿಕೆಯಿಂದಾಗಿ ಯೋಜನೆ ಹಮ್ಮಿಕೊಳ್ಳಲಾಗಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.
ಈ ವಿಚಾರವಾಗಿ ಮಾಜಿ ಅಧಿಕಾರಿಗಳನ್ನು ಮತ್ತು ಪ್ರತಿಪಕ್ಷಗಳನ್ನು ತರಾಟೆಗೆ ತೆಗದುಕೊಂಡಿರುವ ಪುರಿ, ಯೋಜನೆಯು ಸದ್ಯದ ಅವಶ್ಯಕತೆಯಾಗಿದ್ದು, ಪ್ರತಿಷ್ಠೆಯ ವಿಚಾರವಲ್ಲ ಎಂದು ಹೇಳಿದ್ದಾರೆ.
ಈ ಪತ್ರ ಬರೆದವರಲ್ಲಿ ಯೋಜನೆಗೆ ಅಂದು ಸಹಿ ಹಾಕಿದ್ದ ಅಧಿಕಾರಿಯೂ ಇದ್ದಾರೆ. ಅವರು ಹೇಗೆ ಈ ವಿಲಕ್ಷಣ ಪತ್ರಕ್ಕೆ ಸಹಿ ಹಾಕಿದರು ಎಂದು ಸಚಿವರು ಪ್ರಶ್ನಿಸಿದ್ದಾರೆ.
ಲೋಕಸಭೆಯ ಅಂದಿನ ಸ್ಪೀಕರ್ ಮೀರಾ ಕುಮಾರ್ ಮತ್ತು ಕೇಂದ್ರದ ಮಾಜಿ ಸಚಿವ ಜೈರಾಂ ರಮೇಶ್ ಸಹ ಸಂಸತ್‌ನ ಹೊಸ ಕಟ್ಟಡ ನಿರ್ಮಾಣದ ಪರವಾಗಿದ್ದರು. ಅವರೂ ಸಹ ಮೂಢನಂಬಿಕೆಯಿಂದ ಪ್ರೇರಿತರಾಗಿದ್ದರೇ ಎಂದು ಪುರಿ ಪ್ರಶ್ನಿಸಿದ್ದಾರೆ.
ಪ್ರತಿಪಕ್ಷಗಳು ಯೋಜನೆಯ ಬಗ್ಗೆ ತಪ್ಪುಕಲ್ಪನೆ ಮೂಡಿಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.