ADVERTISEMENT

ಮೋದಿ ನೇತೃತ್ವದ ಭಗೀರಥ ಕಾರ್ಯಕ್ಕೆ ಸಣ್ಣ ಸಿಪಾಯಿಯಾಗಿ ಕೆಲಸ ಮಾಡುವೆ: ಹಾರ್ದಿಕ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜೂನ್ 2022, 4:53 IST
Last Updated 2 ಜೂನ್ 2022, 4:53 IST
ಹಾರ್ದಿಕ್‌ ಪಟೇಲ್‌, ಪಿಟಿಐ ಚಿತ್ರ
ಹಾರ್ದಿಕ್‌ ಪಟೇಲ್‌, ಪಿಟಿಐ ಚಿತ್ರ   

ಅಹಮದಾಬಾದ್‌: 'ರಾಷ್ಟ್ರಹಿತ, ಪ್ರದೇಶಹಿತ, ಜನಹಿತ ಹಾಗೂ ಸಮಾಜ ಹಿತದ ದೃಷ್ಟಿಯಿಂದ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದೇನೆ. ಭಾರತದ ಯಶಸ್ವಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಚಾಲ್ತಿಯಲ್ಲಿರುವ ರಾಷ್ಟ್ರ ಸೇವೆಯ ಭಗೀರಥ ಕಾರ್ಯದಲ್ಲಿ ಸಣ್ಣ ಯೋಧನಾಗಿ ಕೆಲಸ ನಿರ್ವಹಿಸುತ್ತೇನೆ' ಎಂದು ಹಾರ್ದಿಕ್‌ ಪಟೇಲ್‌ ಟ್ವೀಟ್‌ ಮಾಡಿದ್ದಾರೆ.

ಕಾಂಗ್ರೆಸ್‌ ಪಕ್ಷದ ಗುಜರಾತ್ ಘಟಕದ ಮಾಜಿ ಕಾರ್ಯಾಧ್ಯಕ್ಷ ಹಾಗೂ ಪಾಟೀದಾರ್ ಮೀಸಲಾತಿ ಆಂದೋಲನದ ನಾಯಕ ಹಾರ್ದಿಕ್ ಪಟೇಲ್ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

‘ಕಾಂಗ್ರೆಸ್‌ ಪಕ್ಷದವರೇ ನನ್ನನ್ನು ನಿರ್ಲಕ್ಷಿಸಿ, ಮೂಲೆಗುಂಪು ಮಾಡುತ್ತಿದ್ದಾರೆ’ ಎಂದು ಹಾರ್ದಿಕ್‌ ಇತ್ತೀಚೆಗೆ ಬಹಿರಂಗವಾಗಿ ಟೀಕಿಸಿದ್ದರು. ರಾಹುಲ್‌ ಗಾಂಧಿ ಅವರಿಂದ ‘ತೇಜೋವಧೆ’ಗೆ ಒಳಗಾಗಿದ್ದೇನೆ ಎಂದು ಹೇಳಿದ್ದರು. ಈ ಘಟನೆಗಳ ನಂತರ ಅವರು ಮೇ 19ರಂದು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.

ADVERTISEMENT

ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಕಟುವಾಗಿ ಟೀಕಿಸುತ್ತಿದ್ದ ಹಾರ್ದಿಕ್‌ ಪಟೇಲ್‌, ಬಿಜೆಪಿ ವಿರುದ್ಧ ₹1,200 ಕೋಟಿ ಆಮಿಷ ಒಡ್ಡಿದ್ದಾಗಿ ಆರೋಪಿಸಿದ್ದರು. 2016ರಲ್ಲಿ, ಸೂರತ್‌ನಲ್ಲಿ ಪಾಟಿದಾರರನ್ನು ಉದ್ದೇಶಿಸಿ ಅಮಿತ್‌ ಶಾ ಭಾಷಣದ ವೇಳೆ ಹಾರ್ದಿಕ್‌ ಪಟೇಲ್‌ ಬೆಂಬಲಿಗರು ಗಲಾಟೆ ಮಾಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯ ಬಗ್ಗೆಯೂ ಹಾರ್ದಿಕ್‌ ಪಟೇಲ್‌ ಟೀಕಿಸಿದ್ದಾರೆ. ಮುಖ್ಯವಾಗಿ ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿ ಅನುಷ್ಠಾನದ ಕುರಿತು ಟೀಕಿಸಿದ್ದರು. ಯಾವುದೇ ಪಕ್ಷದಲ್ಲಿ ಗುರುತಿಸಿಕೊಂಡಿರದಿದ್ದ ಹಾರ್ದಿಕ್‌ 2017ರ ಚುನಾವಣೆಯಲ್ಲಿ ಕಾಂಗ್ರೆಸ್‌ಅನ್ನು ಬೆಂಬಲಿಸಿದ್ದರು. ಪರಿಣಾಮ, ವಿಧಾನಸಭೆಯಲ್ಲಿ ಬಿಜೆಪಿಯ 182 ಸದಸ್ಯ ಬಲವು 99ಕ್ಕೆ ಇಳಿದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.