ಡೆಹ್ರಾಡೂನ್/ಹೃಷಿಕೇಶ್: ಕುಂಭಮೇಳದ ಕೊನೆಯ ಪವಿತ್ರ ‘ಶಾಹಿ ಸ್ನಾನ’ವನ್ನು ಸಾಧುಗಳು ಮಂಗಳವಾರ ಸಾಂಕೇತಿಕವಾಗಿ ನಡೆಸಿದರು.
‘ಬೆಳಿಗ್ಗೆ 10.45 ವರೆಗೆ ಸುಮಾರು 670 ಸಾಧುಗಳು ‘ಶಾಹಿ ಸ್ನಾನ’ ಮಾಡಿದರು ’ ಎಂದು ಅಧಿಕಾರಿಗಳು ತಿಳಿಸಿದರು.
ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳವನ್ನು ಸಾಂಕೇತಿಕವಾಗಿ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದರು. ಇದಕ್ಕೆ ವಿವಿಧ ಅಖಾಡಗಳು ಬೆಂಬಲ ನೀಡಿವೆ.
ಮಹಾ ಕುಂಭಮೇಳದಿಂದ ಪ್ರಮುಖ ಅಖಾಡಗಳು ಹೊರಬರಲು ಪ್ರಾರಂಭಿಸಿವೆ. ಇದರಿಂದಾಗಿ ಕಳೆದ ವಾರದಿಂದ ಕುಂಭಮೇಳದಲ್ಲಿ ಭಾಗವಹಿಸುವವರ ಸಂಖ್ಯೆಯೂ ಬಹಳ ಕಡಿಮೆಯಾಗಿದೆ.
‘ಬೆಳಿಗ್ಗೆ 10.45ಕ್ಕೆ ಜುನಾ, ಅಗ್ನಿ, ಅವಾಹನ್, ಕಿನ್ನರ್ ಅಖಾಡದ 600 ಸಾಧುಗಳು ಪವಿತ್ರ ಸ್ನಾನವನ್ನು ಮಾಡಿದರು. ಈ ಬಳಿಕ ನಿರಂಜನಿ ಮತ್ತು ಆನಂದ್ ಅಖಾಡದ ಸ್ವಾಮೀಜಿಗಳೂ ಸಾಂಕೇತಿಕವಾಗಿ ‘ಶಾಹಿ ಸ್ನಾನ’ ಮಾಡಿದರು. ಇನ್ನುಳಿದ ಏಳು ಅಖಾಡಗಳು ಕೂಡ ಹರ್ ಕಿ ಪೌರಿಯಲ್ಲಿ ಪವಿತ್ರ ಸ್ನಾನವನ್ನು ಮಾಡಲಿವೆ’ ಎಂದು ಗುಪ್ತಚರ ಇಲಾಖೆಯ ಹರಿದ್ವಾರ ವಲಯ ಅಧಿಕಾರಿ ಸುನಿತಾ ವರ್ಮಾ ಅವರು ತಿಳಿಸಿದರು.
ಕುಂಭಮೇಳ ಅಧಿಕಾರಿ ದೀಪಕ್ ರಾವತ್, ಇನ್‌ಸ್ಪೆಕ್ಟರ್ ಜನರಲ್ ಸಂಜಯ್ ಗುಂಜ್ಯಾಲ್, ಪೊಲೀಸ್ ವರಿಷ್ಠಾಧಿಕಾರಿ ಜನಮೇಜಯಾ ಖಂಡೂರಿ ಅವರು, ಪವಿತ್ರ ಸ್ನಾನಕ್ಕೂ ಮುನ್ನ ಹರ್ ಕಿ ಪೌರಿಯಲ್ಲಿ ಮಾಡಲಾಗಿದ್ದ ಸಿದ್ಧತೆಗಳನ್ನು ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.