ಚಂಡೀಗಢ: ಹರಿಯಾಣದ ಮಹೇಂದ್ರಗಢ ಬಳಿ ಶಾಲಾ ವಾಹನವೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆರು ವಿದ್ಯಾರ್ಥಿಗಳು ಮೃತಪಟ್ಟು, 20 ಜನ ಗಾಯಗೊಂಡಿದ್ದ ಪ್ರಕರಣದಲ್ಲಿ, ಚಾಲಕ, ಮುಖ್ಯ ಶಿಕ್ಷಕಿ ಸೇರಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಾನಮತ್ತನಾಗಿದ್ದ ಚಾಲಕ ಧರ್ಮೇಂದರ್ ವಾಹನವನ್ನು ವೇಗವಾಗಿ ಚಾಲನೆ ಮಾಡುತ್ತಿದ್ದ. ಈ ಸಂದರ್ಭದಲ್ಲಿ ನಿಯಂತ್ರಣ ಕಳೆದುಕೊಂಡು ವಾಹನ ಮರಕ್ಕೆ ಡಿಕ್ಕಿ ಹೊಡೆದು, ಮಗುಚಿದೆ. ಚಾಲಕನನ್ನು ಘಟನಾ ಸ್ಥಳದಲ್ಲೇ ವಶಕ್ಕೆ ಪಡೆದು, ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿತ್ತು. ವಾಹನ ಚಾಲನೆ ಸಂದರ್ಭದಲ್ಲಿ ಆತ ಪಾನಮತ್ತನಾಗಿದ್ದ. ಘಟನೆಗೆ ಸಂಬಂಧಿಸಿದಂತೆ ಶಾಲೆಯ ಮುಖ್ಯ ಶಿಕ್ಷಕಿ ದೀಪ್ತಿ ಹಾಗೂ ಸಿಬ್ಬಂದಿ ಹೋಷಿಯಾರ್ ಸಿಂಗ್ ಅವರನ್ನೂ ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.
‘ಅಪಘಾತದ ಸ್ಥಳ ಹೃದಯ ಕಲಕುವಂತಿತ್ತು. ರಕ್ತದ ಮಡುವಿನಲ್ಲಿ ಮೃತ ಮಕ್ಕಳ ದೇಹಗಳಿದ್ದವು. ಗಾಯಗೊಂಡ ಮಕ್ಕಳು ನೆರವಿಗಾಗಿ ಮೊರೆ ಇಟ್ಟು ಚೀರುತ್ತಿದ್ದರು. ಸಮೀಪದಲ್ಲಿ ಹಾದುಹೋಗುತ್ತಿದ್ದವರು ನೆರವಿಗೆ ಧಾವಿಸಿದರು. ನುಜ್ಜುಗುಜ್ಜಾಗಿದ್ದ ಬಸ್ಸಿನೊಳಗೆ ಸಿಲುಕಿದ್ದ ಮಕ್ಕಳನ್ನು ಹೊರಕ್ಕೆ ತರಲು ಪ್ರಯತ್ನಿಸಿದರು’ ಎಂದು ಪೊಲೀಸರು ಘಟನೆಯನ್ನು ವಿವರಿಸಿದ್ದಾರೆ.
ಶಾಲೆಯ ಮಾನ್ಯತೆ ರದ್ದು ಮಾಡುವಂತೆ ಮಹೇಂದ್ರಗಢ ಜಿಲ್ಲಾಧಿಕಾರಿ ಮೋನಿಕಾ ಗುಪ್ತಾ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಘಟನೆ ಕುರಿತು ತನಿಖೆ ನಡೆಸುವಂತೆ ಸಾರಿಗೆ ಸಚಿವ ಸೂಚಿಸಿದ್ದಾರೆ.
ಸಮರ್ಪಕ ದಾಖಲೆ ಇಲ್ಲದ ಕಾರಣ ಅಪಘಾತಗೊಂಡ ಬಸ್ಸಿಗೆ ಕೆಲ ದಿನಗಳ ಹಿಂದೆ ದಂಡ ವಿಧಿಸಲಾಗಿತ್ತು. ಆದರೆ, ಅಪಘಾತ ಸಂಭವಿಸಿದ ಸಂದರ್ಭದಲ್ಲೂ ಬಸ್ಸಿಗೆ ಸೂಕ್ತ ದಾಖಲೆಗಳು ಇರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶಿಕ್ಷಣ ಸಚಿವೆ ಸೀಮಾ ತ್ರಿಖಾ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಈದ್ ಹಬ್ಬದ ಅಂಗವಾಗಿ ಶಾಲೆಗಳಿಗೆ ರಜೆ ನೀಡಲಾಗಿದ್ದರೂ, ಪ್ರವಾಸಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಿದ್ದು ಏಕೆ ಎಂಬುದಕ್ಕೆ ಉತ್ತರಿಸುವಂತೆ ಖಾಸಗಿ ಶಾಲೆಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.
ಘಟನೆ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಆಘಾತ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.