ಚಂಡೀಗಢ: ಸಮಗ್ರ ಸಹಕಾರಿ ಅಭಿವೃದ್ಧಿ ಯೋಜನೆಯಲ್ಲಿ ಸುಮಾರು ₹100 ಕೋಟಿ ಭ್ರಷ್ಟಾಚಾರವನ್ನು ಹರಿಯಾಣದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಶುಕ್ರವಾರ ಬಯಲಿಗೆಳೆದಿದೆ ಎಂದು ಸರ್ಕಾರದ ವಕ್ತಾರರನ್ನು ಉಲ್ಲೇಖಿಸಿ ಅಧಿಕೃತ ಪ್ರಕಟಣೆ ತಿಳಿಸಿದೆ.
ಹಗರಣದಲ್ಲಿ ಭಾಗಿಯಾದ ಆರೋಪದಲ್ಲಿ 10 ಹಿರಿಯ ಅಧಿಕಾರಿಗಳು ಮತ್ತು 4 ಖಾಸಗಿ ವ್ಯಕ್ತಿಗಳು ಸೇರಿದಂತೆ 14 ಜನರನ್ನು ಬಂಧಿಸಲಾಗಿದೆ.
ಹರಿಯಾಣದ ಸಹಕಾರ ಇಲಾಖೆಯು ಸಮಗ್ರ ಸಹಕಾರ ಅಭಿವೃದ್ಧಿ ಯೋಜನೆಯನ್ನು ನಿರ್ವಹಿಸುತ್ತದೆ. ಇದು ವಿವಿಧ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಮತ್ತು ಕೃಷಿ ಪ್ರದೇಶಗಳಲ್ಲಿ ಅಭಿವೃದ್ಧಿ ಮತ್ತು ಸಹಕಾರ ಸಂಘಗಳ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುತ್ತದೆ ಎಂದು ವಕ್ತಾರರು ಹೇಳಿದರು.
ಕೆಲವು ಸಹಾಯಕ ನೋಂದಣಿ ಅಧಿಕಾರಿ ಮತ್ತು ಸಹಕಾರ ಸಂಘಗಳ ಜಿಲ್ಲಾ ನೋಂದಣಿ ಅಧಿಕಾರಿ, ಲೆಕ್ಕಪರಿಶೋಧಕರೊಂದಿಗೆ ಶಾಮೀಲಾಗಿ ವೈಯಕ್ತಿಕ ಲಾಭಕ್ಕಾಗಿ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಫ್ಲಾಟ್, ಜಮೀನು ಮತ್ತು ಇತರ ಆಸ್ತಿಗಳನ್ನು ಖರೀದಿಸಲು ಅಧಿಕೃತ ಖಾತೆಗಳಲ್ಲಿ ಠೇವಣಿ ಮಾಡಿದ ಸರ್ಕಾರಿ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಈ ಅಧಿಕಾರಿಗಳು ಸರ್ಕಾರಿ ದಾಖಲೆಗಳು ಮತ್ತು ಬ್ಯಾಂಕ್ ವಿವರಗಳನ್ನು ನಕಲು ಮಾಡುವ ಮೂಲಕ ತಮ್ಮ ಅವ್ಯವಹಾರವನ್ನು ಮುಚ್ಚಿಡಲು ಪ್ರಯತ್ನಿಸಿದ್ದರು ಎನ್ನಲಾಗಿದೆ.
ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ. ಆರೋಪಿಗಳ ವಿರುದ್ಧ ಕರ್ನಾಲ್ ಮತ್ತು ಅಂಬಾಲಾ ವಲಯ(ಎಸಿಬಿ) ಯಲ್ಲಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. 6 ಮಂದಿ ಗೆಜೆಟೆಡ್ ಅಧಿಕಾರಿಗಳು, ನಾಲ್ವರು ಹೆಚ್ಚುವರಿ ಸಿಬ್ಬಂದಿ ಮತ್ತು ನಾಲ್ವರು ಖಾಸಗಿ ವ್ಯಕ್ತಿಗಳನ್ನು ಬಂಧಿಸಲಾಗಿದೆ.
ಈ ಬಗ್ಗೆ ಎಸಿಬಿ ಮಹಾನಿರ್ದೇಶಕ ಶತ್ರುಜೀತ್ ಕಪೂರ್ ಪ್ರತಿಕ್ರಿಯಿಸಿ, ಸಂಪೂರ್ಣ ಪಾರದರ್ಶಕ ಮತ್ತು ನಿಷ್ಪಕ್ಷಪಾತವಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಭ್ರಷ್ಟಾಚಾರದ ವಿರುದ್ಧ ಇಲಾಖೆಯ ಸಮರ ಮುಂದುವರಿಯುತ್ತದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.