ಚಂಡೀಗಡ: ಹರಿಯಾಣದಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಅಜಯ್ ಮಾಕೆನ್ ಗೆಲುವು ಸಾಧಿಸಿದ್ದಾರೆ ಎಂದು ಸಂಭ್ರಮಿಸಿದ ಕಾಂಗ್ರೆಸ್, ಕೆಲವೇ ಕ್ಷಣಗಳಲ್ಲಿ ಸೋಲಿನ ಆಘಾತ ಅನುಭವಿಸಿದೆ. ಮಾಕೆನ್ ಗೆದ್ದಿದ್ದಾರೆಂದು ಮೊದಲಿಗೆ ಮಾಡಿದ್ದ ಟ್ವೀಟ್ ಅನ್ನು ಮರುಎಣಿಕೆ ಹಿನ್ನೆಲೆಯಲ್ಲಿ ಡಿಲಿಟ್ ಮಾಡಬೇಕಾಯಿತು.
‘ಮಾಕೆನ್ 30 ಮತಗಳನ್ನು ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಗೆಲುವನ್ನು ಘೋಷಣೆ ಮಾಡಲಾಗಿತ್ತು. ಆದರೆ, ಒಂದು ಮತ ರದ್ದಾಗೊಳಿಸಲಾಯಿತು’ ಎಂದು ಕಾಂಗ್ರೆಸ್ ಶಾಸಕ ಬಿ.ಬಿ ಬಾತ್ರಾ ಮಾಧ್ಯಮಗಳಿಗೆ ತಿಳಿಸಿದರು.
ಬಿಜೆಪಿ ಮತ್ತು ಅದರ ಮಿತ್ರ ಪಕ್ಷವಾದ ಜನನಾಯಕ್ ಜನತಾ ಪಕ್ಷದ ಬೆಂಬಲದೊಂದಿಗೆ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಮಾಧ್ಯಮ ಸಂಸ್ಥೆ ಮಾಲೀಕ ಕಾರ್ತಿಕೇಯ ಶರ್ಮಾ ಅವರು ಮಾಕೆನ್ ವಿರುದ್ಧ ಗೆದ್ದಿದ್ದಾರೆ ಎಂದು ಬಾತ್ರಾ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಯ ಕೃಷ್ಣಲಾಲ್ ಪನ್ವರ್ ಅವರು ಮೊದಲ ಸ್ಥಾನದಲ್ಲಿ ಗೆದ್ದಿದ್ದರು.
ಆರಂಭದಲ್ಲಿ ಪನ್ವರ್ ಅವರಿಗೆ 31 ಮತ, ಶರ್ಮಾಗೆ 28, ಮಾಕೆನ್‌ಗೆ 29 ಮತಗಳು ಸಿಕ್ಕಿದ್ದವು. ಆದರೆ, ಲೆಕ್ಕಾಚಾರಗಳು ಬದಲಾಗಿ ಕೊನೆಗೆ ಶರ್ಮಾ ಗೆಲುವಿನ ನಗೆ ಬೀರಿದ್ದಾರೆ.
ಹರಿಯಾಣದ ಒಟ್ಟು 90 ಶಾಸಕರ ಪೈಕಿ, ಒಬ್ಬ ಸ್ವತಂತ್ರ ಶಾಸಕ ಮತ ಚಲಾವಣೆಯಿಂದ ದೂರ ಉಳಿದಿದ್ದರು. ಒಂದು ಮತ ತಿರಸ್ಕೃತಗೊಂಡಿತ್ತು. ಹೀಗಾಗಿ 88 ಮತಗಳು ಚಲಾವಣೆಯಾದವು. ಅಂದರೆ ಪ್ರತಿ ಅಭ್ಯರ್ಥಿಗೆ ಗೆಲ್ಲಲು 29.34 ಮತಗಳು ಬೇಕಾಗಿದ್ದವು. ಪನ್ವಾರ್ ಅವರ 1.66 ಮತಗಳು ಬಿಜೆಪಿ ಬೆಂಬಲಿತ ಶರ್ಮಾ ಅವರಿಗೆ ಎರಡನೇ ಪ್ರಾಶಸ್ತ್ಯದ ಮತವಾಗಿ ವರ್ಗಾವಣೆಯಾದವು. ಹೀಗಾಗಿ ಶರ್ಮಾ ಅವರ ಮತ 28+1.66 ಆಯಿತು. ಆದರೆ, ಮಾಕೆನ್ ಅವರ ಮತ 29 ಆಗಿಯೇ ಉಳಿಯಿತು. ಇದರೊಂದಿಗೆ ಅಂತಿಮವಾಗಿ ಮಾಕೆನ್ ವಿರುದ್ಧ ಶರ್ಮಾ ಜಯ ದಾಖಲಿಸಿದರು.
ಈ ಮೂಲಕ, ಕಾಂಗ್ರೆಸ್ ಗೆಲುವು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಯಿತು.
ಇವುಗಳನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.