ಚಂಡೀಗಢ: ಕುರುಕ್ಷೇತ್ರ ಜಿಲ್ಲೆಯ ಲಡ್ವಾ ವಿಧಾನಸಭೆ ಕ್ಷೇತ್ರದ ಸುನೀಲ್ ಕುಮಾರ್ ಎಂಬವರು ದಾಂಪತ್ಯ ಜೀವನಕ್ಕೆ ಕಾಲಿರಿಸುವ ದಿನವೂ ಮತ ಚಲಾಯಿಸುವುದನ್ನು ತಪ್ಪಿಸಲಿಲ್ಲ.
ಮದುವೆ ದಿನವೇ (ಅಕ್ಟೋಬರ್ 5) ರಾಜ್ಯ ವಿಧಾನಸಭೆ ಚುನಾವಣೆ ನಿಗದಿಯಾಗಿದ್ದರಿಂದ ಮೊದಲು ಮತಕೇಂದ್ರಕ್ಕೆ ತೆರಳಿ ಹಕ್ಕು ಚಲಾಯಿಸಿದ ಅವರು, ನಂತರ ಮದುವೆ ಮಂಟಪಕ್ಕೆ ತೆರಳಿದ್ದಾರೆ. ಆ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಮತದಾನದ ಬಳಿಕ ಮಾತನಾಡಿರುವ ಕುಮಾರ್, 'ಮತ ಚಲಾಯಿಸುವುದು ಅತ್ಯಂತ ಮುಖ್ಯವಾದ ಕೆಲಸ. ಯಾರೊಬ್ಬರೂ ಅದನ್ನು ತಪ್ಪಿಸಿಕೊಳ್ಳಬಾರದು ಎಂದು ಹೇಳಲು ಬಯಸುತ್ತೇನೆ. ನನ್ನ ಹಕ್ಕು ಚಲಾಯಿಸಿ, ಮದುವೆಯಾಗಲು ಹೊರಟಿದ್ದೇನೆ. ಮದುವೆಗೆ ತಡವಾಗಬಹುದು. ಆದರೂ, ಮತ ಚಲಾಯಿಸುವದು ಅತ್ಯಗತ್ಯವಾಗಿತ್ತು' ಎಂದು ಹೇಳಿದ್ದಾರೆ.
ಹರಿಯಾಣದ ಜನರು ಮನೆಗಳಿಂದ ಹೊರಬಂದು, ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಬೇಕು ಎಂದು ಕುಮಾರ್ ಅವರ ತಾಯಿಯೂ ಮನವಿ ಮಾಡಿದ್ದಾರೆ.
90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಇಂದು (ಅಕ್ಟೋಬರ್ 5) ಮತದಾನ ನಡೆಯುತ್ತಿದೆ. ಆಡಳಿತ ಪಕ್ಷ ಬಿಜೆಪಿ ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದೆ. 10 ವರ್ಷಗಳ ಬಳಿಕ ಅಧಿಕಾರಕ್ಕೇರುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಇದೆ.
ಅಕ್ಟೋಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.