ADVERTISEMENT

ಇಂಡಿಯಾ ಮೈತ್ರಿಕೂಟ ಹರಿಯಾಣದಲ್ಲಿ ಹೊಸ ಇತಿಹಾಸ ಬರೆಯಲಿದೆ: ಅಖಿಲೇಶ್ ಯಾದವ್

ಪಿಟಿಐ
Published 6 ಸೆಪ್ಟೆಂಬರ್ 2024, 13:18 IST
Last Updated 6 ಸೆಪ್ಟೆಂಬರ್ 2024, 13:18 IST
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್   

ಲಖನೌ: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಹೊಸ ಇತಿಹಾಸ ಬರೆಯುವ ಸಾಮರ್ಥ್ಯ ಇಂಡಿಯಾ ಮೈತ್ರಿಕೂಟದ ಪಕ್ಷಗಳ ಒಗ್ಗಟ್ಟಿಗೆ ಇದೆ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್‌ ಯಾದವ್‌ ಶುಕ್ರವಾರ ಹೇಳಿದ್ದಾರೆ.

ಬಿಜೆಪಿಯ ಕುಟಿಲ ಮತ್ತು ಸ್ವಾರ್ಥ ರಾಜಕಾರಣವನ್ನು ಸೋಲಿಸುವ ಸಮಯ ಇದಾಗಿದೆ ಎಂದು ಪ್ರತಿಪಾದಿಸಿರುವ ಅವರು, ಕೇಸರಿ ಪಕ್ಷದ ನಕಾರಾತ್ಮಕ, ಕೋಮುವಾದಿ ಮತ್ತು ವಿಭಜಕ ರಾಜಕೀಯವನ್ನು ಸೋಲಿಸುವ ಸಾಮರ್ಥ್ಯವಿರುವ ಇಂಡಿಯಾ ಕೂಟದ ಯಾವುದೇ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.

ಹರಿಯಾಣ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮತ್ತು ಎಎಪಿ, ಸೀಟು ಹಂಚಿಕೆ ವಿಚಾರವಾಗಿ ಭಾರಿ ಪೈಪೋಟಿ ನಡೆಸುತ್ತಿರುವ ಹೊತ್ತಿನಲ್ಲಿ ಅಖಿಲೇಶ್‌ ಈ ಹೇಳಿಕೆ ನೀಡಿದ್ದಾರೆ.

ADVERTISEMENT

ಎಕ್ಸ್‌/ಟ್ವಿಟರ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ಎಸ್‌ಪಿ ಆಗಲಿ ಅಥವಾ ಇಂಡಿಯಾ ಕೂಟದ ಯಾವುದೇ ಪಕ್ಷವಾಗಲಿ, ಇದು ರಾಜಕೀಯ ಅವಕಾಶಗಳನ್ನು ಹುಡುಕಿಕೊಳ್ಳುವ ಸಮಯವಲ್ಲ. ತ್ಯಾಗ ಮತ್ತು ಸ್ವಾರ್ಥರಹಿತವಾಗಿ ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದ್ದಾರೆ. 

'ಜನರ ಕಲ್ಯಾಣದ ಹಾದಿಯಲ್ಲಿ ಸ್ವಾರ್ಥಕ್ಕೆ ಅವಕಾಶವೇ ಇಲ್ಲ' ಎಂದು ಒತ್ತಿ ಹೇಳಿದ್ದಾರೆ.

'ಕುತಂತ್ರಿಗಳು ಹಾಗೂ ಸ್ವಾರ್ಥಿಗಳಿಗೆ ಇತಿಹಾಸದಲ್ಲಿ ಸ್ಥಾನವಿಲ್ಲ. ಅಂತಹ ರಾಜಕಾರಣವನ್ನು ಸೋಲಿಸುವುದಕ್ಕಾಗಿ ಮೇಲೇರಬೇಕಾದ ಐತಿಹಾಸಿಕ ಕ್ಷಣ ಇದಾಗಿದೆ. ಹರಿಯಾಣದ ಶ್ರೇಯಸ್ಸಿಗಾಗಿ ತ್ಯಾಗ ಮಾಡಲು ನಾವು ಮುಕ್ತ ಮನಸ್ಸಿನಿಂದ ಸಿದ್ಧರಿದ್ದೇವೆ' ಎಂದಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಗೆದ್ದೇಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿರುವ ಅಖಿಲೇಶ್‌, 'ನಾವು ಸಾಕಷ್ಟು ಸಲ ಹೇಳಿದ್ದೇವೆ. ಮತ್ತೆ ಹೇಳುತ್ತಿದ್ದೇವೆ. ಮುಂದೆಯೂ ಹೇಳುತ್ತೇವೆ. ಸೀಟು ಹಂಚಿಕೆಯಲ್ಲ, ಗೆಲುವು ಮುಖ್ಯವಾಗಬೇಕು' ಎಂದು ಕರೆ ನೀಡಿದ್ದಾರೆ.

'ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಲ್ಲ, ಬಿಜೆಪಿಯ ಭ್ರಷ್ಟ ಮತ್ತು ಕುಟಿಲ ರಾಜಕೀಯದಿಂದ ತತ್ತರಿಸಿರುವ ಜನರ ನೋವನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದರಿಂದ ಹೊರಗೆ ಕರೆತರುವುದು ಮುಖ್ಯ. ಹರಿಯಾಣದ ಅಭಿವೃದ್ಧಿ ಮತ್ತು ಜನರ ಕಲ್ಯಾಣಕ್ಕೆ ಆದ್ಯತೆ ನೀಡಬೇಕು. ಬಿಜೆಪಿಯು ಕಳೆದ 10 ವರ್ಷಗಳಲ್ಲಿ ಹರಿಯಾಣವನ್ನು ಅಭಿವೃದ್ಧಿಯ ವಿಚಾರದಲ್ಲಿ ಎರಡು ದಶಕಗಳಷ್ಟು ಹಿಂದಕ್ಕೆ ನೂಕಿದೆ' ಎಂದು ಆರೋಪಿಸಿದ್ದಾರೆ.

90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಅಕ್ಟೋಬರ್‌ 5ರಂದು ಮತದಾನ ನಡೆಯಲಿದ್ದು, ಅದೇ ತಿಂಗಳ 8ರಂದು ಫಲಿತಾಂಶ ಪ್ರಕಟವಾಗಲಿದೆ.

ಇಲ್ಲಿನ 10 ಲೋಕಸಭಾ ಸ್ಥಾನಗಳಿಗೆ ಇದೇ ವರ್ಷ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ತಲಾ ಐದು ಕಡೆ ಗೆಲುವು ಸಾಧಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.