ADVERTISEMENT

ಹರಿಯಾಣ ಚುನಾವಣಾ ಅಖಾಡಕ್ಕೆ ಕೇಜ್ರಿವಾಲ್; ಜಗಧ್ರಿಯಲ್ಲಿ ಸೆ. 20 ರಂದು ರೋಡ್‌ ಶೋ

ಪಿಟಿಐ
Published 19 ಸೆಪ್ಟೆಂಬರ್ 2024, 11:02 IST
Last Updated 19 ಸೆಪ್ಟೆಂಬರ್ 2024, 11:02 IST
<div class="paragraphs"><p>ಅರವಿಂದ ಕೇಜ್ರಿವಾಲ್</p></div>

ಅರವಿಂದ ಕೇಜ್ರಿವಾಲ್

   

ಪಿಟಿಐ

ನವದೆಹಲಿ: ಆಮ್‌ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಹರಿಯಾಣ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರು ಜಗಧ್ರಿ ಕ್ಷೇತ್ರದಲ್ಲಿ ಸೆಪ್ಟೆಂಬರ್‌ 20 ರಂದು ರೋಡ್‌ ಶೋ ನಡೆಸಲಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಸಂದೀಪ್‌ ಪಾಠಕ್‌ ಗುರುವಾರ ತಿಳಿಸಿದ್ದಾರೆ.

ADVERTISEMENT

ಕೇಜ್ರಿವಾಲ್‌ ಅವರು ಹರಿಯಾಣದ 11 ಜಿಲ್ಲೆಗಳ 13 ಕಡೆ ನಡೆಯುವ ಸಮಾವೇಶಗಳಲ್ಲೂ ಭಾಗಿಯಾಗಲಿದ್ದಾರೆ. ಶೀಘ್ರದಲ್ಲೇ ದಿನಾಂಕ ಘೋಷಣೆ ಮಾಡಲಾಗುವುದು ಎಂದು ಪಾಠಕ್‌ ಹೇಳಿದ್ದಾರೆ.

90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಅಕ್ಟೋಬರ್‌ 5ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.  8ರಂದು ಫಲಿತಾಂಶ ಪ್ರಕಟವಾಗಲಿದೆ.

ಚುನಾವಣೆಗೂ ಮುನ್ನ ಮೈತ್ರಿಗೆ ಮುಂದಾಗಿದ್ದ ಎಎಪಿ ಮತ್ತು ಕಾಂಗ್ರೆಸ್‌, ಸೀಟು ಹಂಚಿಕೆಗೆ ಮಾತುಕತೆ ನಡೆಸಿದ್ದವು. ಆದರೆ, ಅದು ಕೈಗೂಡದ ಕಾರಣ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧಿಸಲು ಎಎಪಿ ಮುಂದಾಗಿದೆ.

ರಾಜ್ಯದಲ್ಲಿ ಸರ್ಕಾರ ಬದಲಾವಣೆ ಮತ್ತು 'ಕೇಜ್ರಿವಾಲ್ ಮಾಡೆಲ್‌' ಆಡಳಿತ ಜಾರಿ ಸಲುವಾಗಿ ಸಂಪೂರ್ಣ ಸಾಮರ್ಥ್ಯದೊಂದಿಗೆ ಕಣಕ್ಕಿಳಿಯಲು ಎಎಪಿ ಸಜ್ಜಾಗಿದೆ ಎಂದು ಪಾಠಕ್‌ ಸ್ಪಷ್ಟಪಡಿಸಿದ್ದಾರೆ.

ದೆಹಲಿ ಸರ್ಕಾರ ಸದ್ಯ ಹಿಂಪಡೆದಿರುವ 'ಅಬಕಾರಿ ನೀತಿ' ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳದಿಂದ (ಸಿಬಿಐ) ಬಂಧನಕ್ಕೊಳಗಾಗಿದ್ದ ಕೇಜ್ರಿವಾಲ್‌, ಕಳೆದವಾರವಷ್ಟೇ ಜಾಮೀನಿನ ಮೇಲೆ ತಿಹಾರ್‌ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಬಿಡುಗಡೆ ಬೆನ್ನಲ್ಲೇ, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.