ನವದೆಹಲಿ:ಹರಿಯಾಣದಲ್ಲಿ ಬಿಜೆಪಿ ಮುಖಂಡ ಮನೋಹರ್ ಲಾಲ್ ಖಟ್ಟರ್ ಮತ್ತೆ ಅಧಿಕಾರವಹಿಸುವ ವಿಶ್ವಾಸದಲ್ಲಿದ್ದಾರೆ. ಕಾಂಗ್ರೆಸ್ ಸಹ ಬಹುಮತ ಪಡೆಯುವುದಾಗಿ ಹೇಳಿಕೊಳ್ಳುತ್ತಿದೆ. ಈ ನಡುವೆ ಸರ್ಕಾರ ರಚನೆಗೆ ನಮ್ಮ ನಿರ್ಧಾರವೇ ಅಂತಿಮ ಎಂದು ಜೆಜೆಪಿ ಅಧ್ಯಕ್ಷದುಶ್ಯಂತ್ ಚೌಟಾಲಾ ಘೋಷಿಸಿದ್ದಾರೆ.
ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳ ಪೈಕಿಬಿಜೆಪಿ 39ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 30ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಯಾವುದೇ ಪಕ್ಷ ಸರ್ಕಾರ ರಚಿಸಲು 46 ಸ್ಥಾನಗಳ ಸರಳ ಬಹುಮತ ಪಡೆಯುವುದು ಅಗತ್ಯ. ಪ್ರಸ್ತುತ ಫಲಿತಾಂಶದ ಪ್ರಕಾರ ಯಾವುದೇ ಒಂದು ಪಕ್ಷ ಬಹುಮತ ಪಡೆಯುವುದರಿಂದ ದೂರವೇ ಉಳಿದಂತಾಗಿದೆ. 11ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿರುವ ಜನನಾಯಕ್ ಜನತಾ ಪಾರ್ಟಿ(ಜೆಜೆಪಿ) ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಬಹುದಾಗಿದೆ. ಐಎನ್ಎಲ್‌ಡಿ 2 ಹಾಗೂ ಇತರೆ 8ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.
'ಬಿಜೆಪಿಯ 'ಮಿಷನ್ 75' ಗುರಿ ದೂರವಾಗಿದೆ. ಹರಿಯಾಣದ ಜನರು ಬದಲಾವಣೆ ಬಯಸಿದ್ದಾರೆ, ನಮ್ಮ ಪಕ್ಷ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ'ಜೆಜೆಪಿಯ ದುಶ್ಯಂತ್ ಚೌಟಾಲಾ ಹೇಳಿಕೊಂಡಿದ್ದಾರೆ.
ಬಿಜೆಪಿಯಮನೋಹರ್ ಲಾಲ್ ಖಟ್ಟರ್ ಮತ್ತು ಕಾಂಗ್ರೆಸ್‌ನ ಭೂಪೆಂದರ್ ಸಿಂಗ್ ಹೂಡಾ ತಮ್ಮ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.
2014ರ ಚುನಾವಣೆಯಲ್ಲಿ ಬಿಜೆಪಿ 47, ಕಾಂಗ್ರೆಸ್ 15 ಮತ್ತು ಇಬ್ಬರು ಹರಿಯಾಣ ಜನಹಿತ್ ಕಾಂಗ್ರೆಸ್ ಅಭ್ಯರ್ಥಿಗಳು ಕಾಂಗ್ರೆಸ್‌ಗೆ ಬೆಂಬಲ ನೀಡಿದರು. ಐಎನ್‌ಎಲ್‌ಡಿ 19, ಬಹುಜನ ಸಮಾಜ ಪಾರ್ಟಿ ಹಾಗೂ ಶಿರೋಮಣಿ ಅಕಾಲಿ ದಳ ತಲಾ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. ಐದು ಮಂದಿ ಸ್ವತಂತ್ರ ಅಭ್ಯರ್ಥಿಗಳು ಜಯ ಗಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.