ADVERTISEMENT

ಸಾಲು ಸಾಲು ರಜೆ: ವಿಧಾನಸಭಾ ಚುನಾವಣೆ ಮುಂದೂಡಲು ಮನವಿ

ಚುನಾವಣಾ ಆಯೋಗಕ್ಕೆ ಪತ್ರ ಬರೆದ ಹರಿಯಾಣ ಬಿಜೆಪಿ ಘಟಕ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 14:21 IST
Last Updated 24 ಆಗಸ್ಟ್ 2024, 14:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಂಢೀಗಡ: ಅಕ್ಟೋಬರ್‌ 1ಕ್ಕೆ ನಿಗದಿಯಾಗಿರುವ ಹರಿಯಾಣ ವಿಧಾನಸಭಾ ಚುನಾವಣೆಯನ್ನು ಮುಂದೂಡಬೇಕು ಎಂದು ಬಿಜೆಪಿ ರಾಜ್ಯ ಘಟಕವು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಮತದಾನಕ್ಕೂ ಮುನ್ನ ಹಾಗೂ ನಂತರ ನಿರಂತರ ರಜೆಗಳಿದ್ದು, ಮತ ಚಲಾವಣೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಕಳಕಳಿ ವ್ಯಕ್ತಪಡಿಸಿದೆ.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಈ ಸಂಬಂಧ ಚುನಾವಣಾ ಆಯೋಗಕ್ಕೆ ಈಗಾಗಲೇ ಪತ್ರ ಬರೆದಿದ್ದಾರೆ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.

‘ಇ–ಮೇಲ್‌ ಮೂಲಕ ಶುಕ್ರವಾರ ಕಳುಹಿಸಿದ ಪತ್ರವು ತಲುಪಿದೆ’ ಎಂದು ಹರಿಯಾಣದ ಮುಖ್ಯಚುನಾವಣಾಧಿಕಾರಿ ಪಂಕಜ್‌ ಅಗರ್‌ವಾಲ್ ಅವರು ಖಚಿತಪಡಿಸಿದ್ದಾರೆ. 

ADVERTISEMENT

‘ರಾಜ್ಯ ಬಿಜೆಪಿ ಘಟಕವು ಕಳುಹಿಸಿರುವ ಪತ್ರವು ತಲುಪಿದ್ದು, ಅದನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ರವಾನಿಸಲಾಗಿದೆ’ ಎಂದು ತಿಳಿಸಿದರು.

‘ಮತದಾನದ ದಿನವಾದ ಅಕ್ಟೋಬರ್‌ 1ರಂದು ರಾಜ್ಯದಲ್ಲಿ ಎಲ್ಲ ಸಂಸ್ಥೆಗಳಿಗೆ ರಜೆ ನೀಡಲಾಗುತ್ತದೆ. ಮತದಾನಕ್ಕೂ ಹಿಂದೆ ವಾರಾಂತ್ಯವಿರುವ ಕಾರಣ, ದೀರ್ಘರಜೆ ಪಡೆದುಕೊಂಡು, ಕುಟುಂಬಸ್ಥರು ಪ್ರವಾಸಕ್ಕೆ ತೆರಳುವ ಸಾಧ್ಯತೆಯಿದೆ. ಇದರಿಂದ ಮತದಾನ ಪ್ರಮಾಣದ ಮೇಲೂ ಪರಿಣಾಮ ಬೀರಲಿದೆ’ ಎಂದು ಬಿಜೆಪಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸದಸ್ಯ ವರೀಂದರ್‌ ಗರ್ಗ್‌ ತಿಳಿಸಿದರು.

‘ಈಗಾಗಲೇ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇವೆ. ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯಲು ಹೊಸ ದಿನಾಂಕ ನಿಗದಿಪಡಿಸುವುದು ಸೂಕ್ತ’ ಎಂದು ಅವರು ತಿಳಿಸಿದರು. 

‘ಸೆ.28ರಂದು ಶನಿವಾರ ವಾರಾಂತ್ಯದ ರಜೆ ಇರುತ್ತದೆ. ಭಾನುವಾರ ರಜಾದಿನ. ಅ.1 ಮತದಾನಕ್ಕಾಗಿ ಸಾರ್ವತ್ರಿಕ ರಜೆಯಿದ್ದು, ಅ.2ರಂದು ಗಾಂಧಿ ಜಯಂತಿ, ಅ.3ರಂದು ಮಹಾರಾಜ ಅಗ್ರಸೇನ್‌ ಜಯಂತಿಗೆ ರಜೆ ಇರಲಿದೆ’ ಎಂದು ಗರ್ಗ್‌ ವಿವರಿಸಿದರು.

ಕೇಂದ್ರ ಚುನಾವಣಾ ಆಯೋಗವು ಆಗಸ್ಟ್‌ 16ರಂದು ಹರಿಯಾಣ ವಿಧಾನಸಭೆಗೆ ದಿನಾಂಕ ಘೋಷಿಸಿದ್ದು, ಅಕ್ಟೋಬರ್‌ 1ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಅ.4ರಂದು ಫಲಿತಾಂಶ ಪ್ರಕಟವಾಗಲಿದೆ.

ರಾಜ್ಯದಲ್ಲಿ ಕಳೆದ 10 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದ್ದು, ಹ್ಯಾಟ್ರಿಕ್‌ ಜಯ ಗಳಿಸುವ ಉಮೇದಿನಲ್ಲಿದೆ. ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್‌ ಪ್ರಬಲ ಪೈಪೋಟಿ ನೀಡುತ್ತಿದೆ. 

ಹರಿಯಾಣ ವಿಧಾನಸಭೆಯ ಈಗಿನ ಅವಧಿ ನವೆಂಬರ್‌ 3ಕ್ಕೆ ಮುಕ್ತಾಯಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.