ADVERTISEMENT

ಒಬಿಸಿ ‘ಕೆನೆಪದರ’ದ ವಾರ್ಷಿಕ ಆದಾಯ ಮಿತಿ ₹8 ಲಕ್ಷಕ್ಕೆ ಹೆಚ್ಚಳ: ಹರಿಯಾಣ ಸಿಎಂ

ಪಿಟಿಐ
Published 24 ಜೂನ್ 2024, 5:04 IST
Last Updated 24 ಜೂನ್ 2024, 5:04 IST
ನಯಾಬ್‌ ಸಿಂಗ್ ಸೈನಿ
ನಯಾಬ್‌ ಸಿಂಗ್ ಸೈನಿ   

ಚಂಡೀಗಢ(ಹರಿಯಾಣ): ಇತರೆ ಹಿಂದುಳಿದ ವರ್ಗದ(ಒಬಿಸಿ) ‘ಕೆನೆಪದರ’ ವ್ಯಾಪ್ತಿಗೆ ಸೇರುವವರ ವಾರ್ಷಿಕ ಆದಾಯದ ಮಿತಿಯನ್ನು ₹6 ಲಕ್ಷದಿಂದ ₹8 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಘೋಷಿಸಿದ್ದಾರೆ.

‘ಕೆನೆಪದರ’ (Creamy Layer) ಪರಿಕಲ್ಪನೆಯನ್ನು ಇತರೆ ಹಿಂದುಳಿದ ವರ್ಗದ(ಒಬಿಸಿ) ಶ್ರೀಮಂತ ಮತ್ತು ಸುಶಿಕ್ಷಿತ ವರ್ಗವನ್ನು ಸೂಚಿಸಲು ಬಳಸಲಾಗುತ್ತದೆ.

ಗುರುಗ್ರಾಮದಲ್ಲಿ ನಡೆದ 'ಒಬಿಸಿ ಮೋರ್ಚಾ ಸರ್ವ ಸಮಾಜ ಸಮ್ರಸ್ತ ಸಮ್ಮೇಳನ' ಸಭೆಯನ್ನುದ್ದೇಶಿಸಿ ಮಾತನಾಡಿದ ಸೈನಿ, ‘ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಪ್ರಸ್ತುತ ಶೇ15 ರಷ್ಟಿರುವ ಮೀಸಲಾತಿಯನ್ನು ಶೇ 27ಕ್ಕೆ ಹೆಚ್ಚಿಸಲಾಗುವುದು’ ಎಂದರು.

ADVERTISEMENT

‘ರಾಜ್ಯದಲ್ಲಿ ಒಬಿಸಿ ಸಮುದಾಯದ ಕಲ್ಯಾಣವನ್ನು ಖಾತ್ರಿಪಡಿಸಲು ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಈ ವರ್ಗದ ಯುವಕರಿಗೆ ಹೆಚ್ಚಿನ ಯೋಜನೆಗಳನ್ನು ಒದಗಿಸುವ ಪ್ರಮುಖ ಗುರಿಯನ್ನು ಸರ್ಕಾರ ಹೊಂದಿದೆ’ ಎಂದು ಹೇಳಿದರು.

‘ಹಿಂದುಳಿದ ಕಲ್ಯಾಣ ಇಲಾಖೆಯಲ್ಲಿ ಖಾಲಿಯಿರುವ ಗ್ರೂಪ್ ಎ ಮತ್ತು ಗ್ರೂಪ್‌ ಬಿ ಹುದ್ದೆಗಳನ್ನು ಆದ್ಯತೆಯ ಮೇರೆಗೆ ಭರ್ತಿ ಮಾಡಲಾಗುವುದು. ಇದಕ್ಕಾಗಿ ವಿಶೇಷ ನೇಮಕಾತಿ ನಡೆಸಲಾಗುತ್ತದೆ’ ಎಂದರು.

‘ಪ್ರಸ್ತುತ ₹6 ಲಕ್ಷ ಇರುವ ‘ಕೆನೆಪದರ‘ದ ವಾರ್ಷಿಕ ಆದಾಯ ಮಿತಿಯನ್ನು ಇದೀಗ ₹8 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಕ್ರಮವು ಒಬಿಸಿ ಸಮುದಾಯಕ್ಕೆ ಉದ್ಯೋಗದಲ್ಲಿ ಉತ್ತಮ ಪ್ರಯೋಜನಗಳನ್ನು ಒದಗಿಸುತ್ತದೆ’ ಎಂದರು.

‘ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸಿಕೊಳ್ಳಲು ನಮ್ಮ ಸರ್ಕಾರ ₹12 ಸಾವಿರದಿಂದ ₹20 ಸಾವಿರದವರೆಗೆ ವಿದ್ಯಾರ್ಥಿವೇತನವನ್ನು ನೀಡುವ ಮೂಲಕ ಒಬಿಸಿ ಮಕ್ಕಳ ಶಿಕ್ಷಣವನ್ನು ಬೆಂಬಲಿಸುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.