ADVERTISEMENT

ಹರಿಯಾಣ: ಬಹುಮತ ಸಾಬೀತಿಗೆ ಸೂಚಿಸಲು ಜೆಜೆಪಿ ಒತ್ತಾಯ

ಪಿಟಿಐ
Published 9 ಮೇ 2024, 15:37 IST
Last Updated 9 ಮೇ 2024, 15:37 IST
ದುಷ್ಯಂತ್‌ ಚೌಟಾಲ
ದುಷ್ಯಂತ್‌ ಚೌಟಾಲ   

ಚಂಡೀಗಢ: ಮೂವರು ಪಕ್ಷೇತರ ಶಾಸಕರು ಮುಖ್ಯಮಂತ್ರಿ ನಾಯಬ್‌ ಸಿಂಗ್‌ ಸೈನಿ ನೇತೃತ್ವದ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂತೆಗೆದುಕೊಂಡಿರುವ ಬೆನ್ನಲ್ಲೇ, ಮುಖ್ಯಮಂತ್ರಿಗೆ ಬಹುಮತ ಸಾಬೀತುಪಡಿಸುವಂತೆ ಸೂಚಿಸಬೇಕು ಎಂದು ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರನ್ನು ಜೆಜೆಪಿ ನಾಯಕ ದುಷ್ಯಂತ್ ಚೌಟಾಲ ಒತ್ತಾಯಿಸಿದ್ದಾರೆ.

ಮೂವರು ಪಕ್ಷೇತರ ಶಾಸಕರು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದ್ದಾಗಿ ಮಂಗಳವಾರ ಘೋಷಿಸಿದ ನಂತರ, ಮುಖ್ಯಮಂತ್ರಿ ಸೈನಿ ನೇತೃತ್ವದ ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ.

ಈ ಕುರಿತು ರಾಜ್ಯಪಾಲರಿಗೆ ಬುಧವಾರ ಪತ್ರ ಬರೆದಿರುವ ದುಷ್ಯಂತ್‌ ಅವರು, ‘ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಈಗ ಬಹುಮತ ಇಲ್ಲ. ಹೀಗಾಗಿ, ಕೂಡಲೇ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಸೂಚಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

ಇನ್ನೊಂದೆಡೆ, ಮೂವರು ಪಕ್ಷೇತರರು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸು ಪಡೆದ ನಂತರ, ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವುದಕ್ಕಾಗಿ ಕಾಂಗ್ರೆಸ್‌ಗೆ ಬೆಂಬಲ ನೀಡಲು ಸಿದ್ಧ ಎಂಬುದಾಗಿ ಜನನಾಯಕ ಜನತಾಪಾರ್ಟಿ(ಜೆಜೆಪಿ) ಬುಧವಾರ ಹೇಳಿತ್ತು.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಸೈನಿ, ತಮ್ಮ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದರು. ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್‌ ಖಟ್ಟರ್‌ ಕೂಡ ಇದೇ ಮಾತನ್ನು ಹೇಳಿದ್ದಾರಲ್ಲದೇ, ‘ಹಲವು ಶಾಸಕರು ಬಿಜೆಪಿ ಜೊತೆ ಸಂಪರ್ಕದಲ್ಲಿದ್ದು, ಯಾವುದೇ ಚಿಂತಿಸುವ ಅಗತ್ಯ ಇಲ್ಲ’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.