ಚಂಡೀಗಡ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಜತೆ ಮಾತುಕತೆ ಪುನರಾರಂಭಿಸುವಂತೆ ಹರಿಯಾಣ ಉಪ ಮುಖ್ಯಮಂತ್ರಿ ದುಷ್ಯಂತ್ ಚೌಟಾಲ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
ನೂರಾರು ದಿನಗಳಿಂದ ದೆಹಲಿ ಗಡಿಗಳಲ್ಲಿ ಬೀಡುಬಿಟ್ಟಿರುವ ರೈತರ ಜತೆ ಮೂವರಿಂದ ನಾಲ್ವರು ಸಚಿವರನ್ನೊಳಗೊಂಡ ತಂಡ ಮಾತುಕತೆ ನಡೆಸಬೇಕು ಎಂದೂ ಅವರು ಹೇಳಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಅವರು, ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ನಮ್ಮ ‘ಅನ್ನದಾತರು’ ದೆಹಲಿಯ ರಸ್ತೆಗಳಲ್ಲಿದ್ದಾರೆ ಎಂಬುದನ್ನು ನಿಮ್ಮ ಗಮನಕ್ಕೆ ತರಬಯಸುತ್ತೇನೆ. ಪ್ರತಿಭಟನೆಯು ನೂರಕ್ಕಿಂತಲೂ ಹೆಚ್ಚು ದಿನಗಳು ಮುಂದುವರಿದಿರುವುದು ಕಳವಳಕಾರಿ ಅಂಶ’ ಎಂದು ಉಲ್ಲೇಖಿಸಿದ್ದಾರೆ.
ಎಲ್ಲ ಸಮಸ್ಯೆಗಳಿಗೂ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದೂ ಅವರು ಹೇಳಿದ್ದಾರೆ.
ಸಂಯುಕ್ತ ಮೋರ್ಚಾದ ಹಲವು ಕಳವಳಗಳಿಗೆ ಈ ಹಿಂದೆ ಸರ್ಕಾರ ಮತ್ತು ರೈತರ ನಡುವೆ ನಡೆದ ಮಾತುಕತೆಯಿಂದ ಪರಿಹಾರ ದೊರೆತಿತ್ತು. ಹೀಗಾಗಿ ಈಗಲೂ ಅದೇ ರೀತಿ ಮೂವರಿಂದ ನಾಲ್ವರು ಸಚಿವರನ್ನೊಳಗೊಂಡ ತಂಡವು ಮಾತುಕತೆ ನಡೆಸುವುದು ಸೂಕ್ತ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.