ADVERTISEMENT

ಹರಿಯಾಣದಲ್ಲಿ ಟ್ರಕ್‌ ಹರಿಸಿ ಡಿವೈಎಸ್‌ಪಿ ಹತ್ಯೆ: ಶೀಘ್ರ ಕ್ರಮಕ್ಕೆ ಆಗ್ರಹ

ಪಿಟಿಐ
Published 20 ಜುಲೈ 2022, 11:24 IST
Last Updated 20 ಜುಲೈ 2022, 11:24 IST
ಡಿವೈಎಸ್‌ಪಿ ಸುರೇಂದ್ರ ಸಿಂಗ್‌
ಡಿವೈಎಸ್‌ಪಿ ಸುರೇಂದ್ರ ಸಿಂಗ್‌   

ಗುರುಗ್ರಾಮ: ಅಕ್ರಮ ಕಲ್ಲುಗಣಿಗಾರಿಕೆಯ ಕುರಿತು ತನಿಖೆ ನಡೆಸುತ್ತಿದ್ದ ಹರಿಯಾಣದ ನೂಹ್‌ ಜಿಲ್ಲೆಯ ತೌರುವಿನ ಡಿವೈಎಸ್‌ಪಿ ಸುರೇಂದ್ರ ಸಿಂಗ್‌ ಅವರನ್ನು ಹತ್ಯೆ ಮಾಡಿದ್ದನ್ನು ವಿರೋಧಿಸಿ, ತೌರು ಪಟ್ಟಣದ ಅಂಗಡಿಗಳ ಮಾಲೀಕರು ಬುಧವಾರ ಅಂಗಡಿಗಳನ್ನು ಬಂದ್‌ ಮಾಡಿದರು.

ಡಿವೈಎಸ್‌ಪಿ ಹತ್ಯೆಯನ್ನು ಖಂಡಿಸಿ ಹರಿಯಾಣದ ಲೋಕೋಪಯೋಗಿ ಒಕ್ಕೂಟ ಸೇರಿದಂತೆ,ಶಾಲಾ ಶಿಕ್ಷಕರ ಸಂಘ ಮತ್ತು ತೌರುವಿನ ವಿವಿಧ ಸಂಘಟನೆಗಳು ಉಪವಿಭಾಗಾಧಿಕಾರಿ ಸುರೇಂದರ್‌ ಪಾಲ್‌ ಅವರ ಕಚೇರಿಯವರೆಗೂ ಜಾಥಾ ನಡೆಸಿ, ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದವು.

ಮಂಗಳವಾರ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುವ ವೇಳೆ, ಸುರೇಂದ್ರ ಸಿಂಗ್ ಟ್ರಕ್‌ವೊಂದನ್ನು ನಿಲ್ಲಿಸಲು ಸೂಚಿಸಿದ್ದರು. ದಾಖಲೆಗಳನ್ನು ಪರಿಶೀಲಿಸಲೆಂದು ಸುರೇಂದ್ರ ಅವರು ಟ್ರಕ್‌ನ ಬಳಿ ಬರುತ್ತಿದ್ದಾಗ, ಚಾಲಕ ಅವರ ಮೇಲೆಯೇ ಟ್ರಕ್‌ ಹಾಯಿಸಿ ಹತ್ಯೆ ಮಾಡಿದ್ದ.

‘ಡಿವೈಎಸ್‌ಪಿ ಅವರ ಸಾವಿನ ಬಳಿಕ ಎನ್‌ಕೌಂಟರ್‌ ನಡೆಸಿ ಟ್ರಕ್‌ನ ಕ್ಲೀನರ್‌ನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ನಾಪತ್ತೆಯಾಗಿರುವ ಪ್ರಮುಖ ಆರೋಪಿ ಟ್ರಕ್‌ ಚಾಲಕ ಮಿತ್ತರ್‌ನ ಮನೆಯ ಮೇಲೆ ಮಂಗಳವಾರ ರಾತ್ರಿ ದಾಳಿ ನೆಡೆಸಲಾಗಿತ್ತು. ಆದರೆ ಮಿತ್ತರ್‌ನ ಮನೆಗೆ ಬೀಗ ಹಾಕಲಾಗಿದ್ದು, ಆತನ ಕುಟುಂಬದವರು ಪರಾರಿಯಾಗಿದ್ದಾರೆ. ಮಿತ್ತರ್‌ನ ಮೊಬೈಲ್‌ ಕೂಡ ಸ್ವಿಚ್‌ ಆಫ್‌ ಆಗಿದೆ. ಮಿತ್ತರ್‌ನನ್ನು ಬಂಧಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದುನುಹ್‌ ಅಪರಾಧ ವಿಭಾಗದ ಹಿರಿಯ ತನಿಖಾಧಿಕಾರಿಯೊಬ್ಬರು ತಿಳಿಸಿದರು.

‘ನಾವು ಶೀಘ್ರದಲ್ಲೇ ಪ್ರಮುಖ ಆರೋಪಿಯನ್ನು ‍ಬಂಧಿಸುತ್ತೇವೆ’ ಎಂದು ಎಸ್‌ಪಿ ವರುಣ್‌ ಸಿಂಗ್ಲಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.