ADVERTISEMENT

Haryana Election Result: ದೇವಿಲಾಲ್ ಕುಟುಂಬದ ಆರು ಮಂದಿಗೆ ಸೋಲಿನ ಕಹಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 23:30 IST
Last Updated 8 ಅಕ್ಟೋಬರ್ 2024, 23:30 IST
<div class="paragraphs"><p>ದುಷ್ಯಂತ್ ಚೌಟಾಲ(ಸಂಗ್ರಹ ಚಿತ್ರ)</p></div>

ದುಷ್ಯಂತ್ ಚೌಟಾಲ(ಸಂಗ್ರಹ ಚಿತ್ರ)

   

ಪಿಟಿಐ

ನವದೆಹಲಿ: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ರಾಜಕೀಯ ಹಿನ್ನೆಲೆಯ ಪ್ರಭಾವಿ ಕುಟುಂಬಗಳ ಅಭ್ಯರ್ಥಿಗಳಿಗೆ ಮತದಾರರು ಸೋಲಿನ ರುಚಿ ತೋರಿಸಿದ್ದಾರೆ. ದಿವಂಗತ ದೇವಿಲಾಲ್ ಕುಟುಂಬದ ಎಂಟು ಅಭ್ಯರ್ಥಿಗಳ ಪೈಕಿ ಆರು ಮಂದಿ ಸೋಲು ಕಂಡಿದ್ದಾರೆ. ಹರಿಯಾಣದ ಮಾಜಿ ಉಪಮುಖ್ಯಮಂತ್ರಿ ಮತ್ತು ಜೆಜೆಪಿಯ ಮುಂಚೂಣಿಯ ನಾಯಕ ದುಷ್ಯಂತ್ ಚೌಟಾಲಾ ಅವರು ಅತ್ಯಂತ ಹೀನಾಯ ಸೋಲು ಕಂಡಿದ್ದು, ಅವರು ಐದನೇ ಸ್ಥಾನಕ್ಕೆ ಕುಸಿದು, ಠೇವಣಿ ಕಳೆದುಕೊಂಡಿದ್ದಾರೆ. 

ADVERTISEMENT

ದೇವಿಲಾಲ್ ಅವರ ಮರಿ ಮೊಮ್ಮಗ ಮತ್ತು ಓಂ ಪ್ರಕಾಶ್ ಚೌಟಾಲಾ ಅವರ ಮೊಮ್ಮಗನಾದ ದುಷ್ಯಂತ್ ಅವರು ತಮ್ಮ ಕುಟುಂಬದ ಭದ್ರಕೋಟೆ ಎಂದು ಪರಿಗಣಿಸಲಾದ ಉಚ್ಚನ ಕಲಾನ್‌ ಕ್ಷೇತ್ರದಲ್ಲಿ ಈ ಬಾರಿ ಕೇವಲ 7,950 ಮತಗಳನ್ನು ಪಡೆದಿದ್ದಾರೆ. ದುಶ್ಯಂತ್‌ 2019ರ ಚುನಾವಣೆಯಲ್ಲಿ 92,504 ಮತಗಳನ್ನು ಪಡೆದಿದ್ದರು.

ಹಿರಿಯ ನಾಯಕ ಬೀರೇಂದ್ರ ಸಿಂಗ್ ಅವರ ಪುತ್ರ, ಕಾಂಗ್ರೆಸ್‌ನ ಬ್ರಿಜೇಂದ್ರ ಸಿಂಗ್ ಅವರು ಉಚ್ಚನ ಕಾಲನ್‌ ಕ್ಷೇತ್ರದಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ದುಷ್ಯಂತ್‌ ಚೌಟಾಲಾ ಅವರ ಸಹೋದರ ದಿಗ್ವಿಜಯ್ ಸಿಂಗ್ ಚೌಟಾಲಾ ಮತ್ತು ದೇವಿಲಾಲ್ ಅವರ ಇನ್ನೊಬ್ಬ ಮೊಮ್ಮಗ ಕಾಂಗ್ರೆಸ್‌ನ ಅಮಿತ್ ಸಿಹಾಗ್ ಅವರು ತಮ್ಮ ಸೋದರಸಂಬಂಧಿ ಐಎನ್‌ಎಲ್‌ಡಿಯ ಆದಿತ್ಯ ದೇವಿಲಾಲ್ ವಿರುದ್ಧ ಡಬ್ವಾಲಿಯಲ್ಲಿ ಸೋತಿದ್ದಾರೆ. ಇನ್ನು, ಆದಿತ್ಯ ಅವರ ತಂದೆ ಅಭಯ್ ಚೌಟಾಲಾ ಅವರನ್ನು ಎಲ್ಲೆನಾಬಾದ್‌ನಲ್ಲಿ ಕಾಂಗ್ರೆಸ್‌ನ ಭರತ್ ಸಿಂಗ್ ಬೇನಿವಾಲ್ ಅವರು 15,000 ಮತಗಳಿಂದ ಸೋಲಿಸಿದ್ದಾರೆ.

‌ದೇವಿಲಾಲ್ ಅವರ ಮತ್ತೊಬ್ಬ ಮೊಮ್ಮಗ ಅರ್ಜುನ್ ಚೌಟಾಲಾ ತಮ್ಮ ಚಿಕ್ಕಪ್ಪ ರಂಜಿತ್ ಚೌಟಾಲಾರನ್ನು ಸೋಲಿಸಿದ್ದಾರೆ. ದೇವಿಲಾಲ್ ಅವರ ಸೊಸೆ ಸುನೈನಾ ಚೌಟಾಲಾ ಕೂಡ ಫತೇಹಾಬಾದ್‌ನಲ್ಲಿ ಸೋಲು ಕಂಡಿದ್ದಾರೆ. 

 ಆದಿತ್ಯ ಮತ್ತು ಅರ್ಜುನ್ ಅವರನ್ನು ಹೊರತುಪಡಿಸಿ, ಕಣದಲ್ಲಿದ್ದ ದೇವಿಲಾಲ್ ಅವರ ಎಲ್ಲ ವಂಶಸ್ಥರು ಚುನಾವಣೆಯಲ್ಲಿ ಸೋಲುಂಡಿದ್ದಾರೆ. ಹರಿಯಾಣದ ಮತ್ತೊಬ್ಬ ಮುತ್ಸದ್ದಿ, ದಿವಂಗತ ಭಜನ್ ಲಾಲ್ ಅವರ ಮೊಮ್ಮಗ, ಕುಲದೀಪ್ ಬಿಷ್ಣೋಯ್ ಅವರ ಪುತ್ರ ಭವ್ಯ ಬಿಷ್ಣೋಯ್ ಅವರ ತಮ್ಮ ಭದ್ರಕೋಟೆ ಆದಂಪುರದಲ್ಲೇ ನೆಲಕಚ್ಚಿದ್ದಾರೆ. ಇವರನ್ನು ಕಾಂಗ್ರೆಸ್‌ನ ಚಂದ್ರಪ್ರಕಾಶ್ 1,268 ಮತಗಳಿಂದ ಸೋಲಿಸಿದ್ದಾರೆ.

ಗೆದ್ದು ಬೀಗಿದವರು: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಅವರ ಪುತ್ರ ಆದಿತ್ಯ ಅವರು ತಮ್ಮ ರಾಜಕೀಯ ಇನಿಂಗ್ಸ್‌ ಅನ್ನು ಕೈತಾಲ್‌ನಿಂದ ಗೆಲುವಿನೊಂದಿಗೆ ಪ್ರಾರಂಭಿಸಿದ್ದಾರೆ. ಆದಿತ್ಯ ಸುರ್ಜೆವಾಲಾ ಹರಿಯಾಣದ ಅತ್ಯಂತ ಕಿರಿಯ ಶಾಸಕರೆನಿಸಿದ್ದಾರೆ. ಇವರ ಅಜ್ಜ ಶಂಶೇರ್ ಸಿಂಗ್ ಸುರ್ಜೆವಾಲಾ ಮತ್ತು ತಂದೆ ರಣದೀಪ್‌ ಸುರ್ಜೆವಾಲಾ ಈ ಹಿಂದೆ ಈ ಕ್ಷೇತ್ರದಲ್ಲಿ ಗೆದ್ದಿದ್ದರು.

ತೋಷಮ್‌ನ ಶ್ರುತಿ ಚೌಧರಿ ತಮ್ಮ ಸೋದರ ಸಂಬಂಧಿ ಅನಿರುದ್ಧ ಚೌಧರಿ ಅವರನ್ನು ಸೋಲಿಸಿದ್ದಾರೆ. ಈ ಇಬ್ಬರೂ ಕಾಂಗ್ರೆಸ್ ಹಿರಿಯ ನಾಯಕ, ದಿವಂಗತ ಬನ್ಸಿಲಾಲ್ ಅವರ ಮೊಮ್ಮಕ್ಕಳು. ಇತ್ತೀಚೆಗಷ್ಟೇ ರಾಜ್ಯಸಭೆಗೆ ಆಯ್ಕೆಯಾಗಿದ್ದ ಶ್ರುತಿ ಮತ್ತು ಆಕೆಯ ತಾಯಿ ಕಿರಣ್ ಚೌಧರಿ ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಕೇಂದ್ರ ಸಚಿವ ರಾವ್ ಇಂದರ್‌ಜಿತ್ ಸಿಂಗ್ ಅವರ ಪುತ್ರಿ ಆರ್ತಿ ಸಿಂಗ್ ರಾವ್ ಕೂಡ ಅಟೆಲಿಯಿಂದ ಗೆಲುವು ಸಾಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.