ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಗೆ ನೀರು ಹರಿಸುತ್ತಿದ್ದ ಹತ್ನಿಕುಂಡ್ ಬ್ಯಾರೇಜ್‌ನ ಎಲ್ಲ ಬಾಗಿಲುಗಳನ್ನು ಹರಿಯಾಣ ಸರ್ಕಾರ ಮುಚ್ಚಿದೆ ಎಂದು ಆರೋಪಿಸಿರುವ ಸಚಿವೆ ಅತಿಶಿ, ಇದರ ವಿರುದ್ಧ ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
ತೀವ್ರ ನೀರಿನ ಸಮಸ್ಯೆ ಮತ್ತು ಬಿಸಿಲಿನ ತಾಪದಿಂದ ಕಂಗೆಟ್ಟಿರುವ ದೆಹಲಿಗೆ ನೀರು ಹರಿಸುವಂತೆ ಆಗ್ರಹಿಸಿ ಸಚಿವೆ ಅತಿಶಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದೆ.
‘ದೆಹಲಿ ಪಾಲಿನ ನೀರು ಪಡೆಯಲು ನಾನು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದೇನೆ. ಹರಿಯಾಣ ಸರ್ಕಾರವು ದೆಹಲಿಗೆ 613 ಎಂಜಿಡಿ ನೀರು ಬದಲು 513 ಎಂಜಿಡಿಯಷ್ಟನ್ನೇ ನೀಡುತ್ತಿದೆ. 100 ಎಂಜಿಡಿ ಕೊರತೆಯಿಂದಾಗಿ ದೆಹಲಿಯ 28 ಲಕ್ಷ ಜನ ಪರದಾಡುವಂತಾಗಿದೆ. ಹತ್ನಿಕುಂಡ್ ಬ್ಯಾರೇಜ್ ನೀರಿನಿಂದ ತುಂಬಿದೆ. ಆದರೆ, ದೆಹಲಿಗೆ ನೀರು ತಲುಪಬಾರದೆಂಬ ಉದ್ದೇಶದಿಂದ ಬ್ಯಾರೇಜ್‌ನ ಎಲ್ಲ ಬಾಗಿಲುಗಳನ್ನು ಮುಚ್ಚಲಾಗಿದೆ ಎಂದು ಕೆಲವು ಪತ್ರಕರ್ತರು ಹೇಳಿದ್ದಾರೆ’ ಎಂದು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ವಿಡಿಯೊ ಸಂದೇಶದಲ್ಲಿ ಅವರು ತಿಳಿಸಿದ್ದಾರೆ.
ದೆಹಲಿಗೆ ನೀರು ಹರಿಸುವಂತೆ ಹರಿಯಾಣ ಸರ್ಕಾರವನ್ನು ಒತ್ತಾಯಿಸಿರುವ ಸಚಿವೆ ಅತಿಶಿ, ದೆಹಲಿ ಪಾಲಿನ ನೀರು ಪಡೆಯುವವರೆಗೆ ತಮ್ಮ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
ಕುಡಿಯುವ ನೀರಿನ ಪೂರೈಕೆಗಾಗಿ ದೆಹಲಿಯು ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳನ್ನು ಅವಲಂಬಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.