ADVERTISEMENT

ಹರಿಯಾಣ ಡಿವೈಎಸ್‌ಪಿ ಸುರೇಂದ್ರ ಸಿಂಗ್ ಹತ್ಯೆ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶ

ಪಿಟಿಐ
Published 21 ಜುಲೈ 2022, 6:19 IST
Last Updated 21 ಜುಲೈ 2022, 6:19 IST
ಅನಿಲ್ ವಿಜ್
ಅನಿಲ್ ವಿಜ್    

ಚಂಡೀಗಢ: ಅಕ್ರಮ ಕಲ್ಲು ಗಣಿಗಾರಿಕೆ ತಡೆಯಲು ಮುಂದಾಗಿ ಹತ್ಯೆಗೀಡಾದ ಡಿವೈಎಸ್‌ಪಿ ಸುರೇಂದ್ರ ಸಿಂಗ್‌ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸಲುಹರಿಯಾಣ ಸರ್ಕಾರ ಆದೇಶಿಸಿದೆ.

ಹರಿಯಾಣದ ನೂಹ್‌ ಜಿಲ್ಲೆಯ ಅರಾವಳಿ ಬೆಟ್ಟ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ತಡೆಯಲು ಮುಂದಾಗಿದ್ದ ಡಿವೈಎಸ್‌ಪಿಸುರೇಂದ್ರ ಸಿಂಗ್‌ಮೇಲೆ ಟ್ರಕ್‌ಹರಿಸಿ ಮಂಗಳವಾರ ಹತ್ಯೆ ಮಾಡಲಾಗಿತ್ತು.

ಅರಾವಳಿ ಬೆಟ್ಟ ಪ್ರದೇಶದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಬಗ್ಗೆ ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುವುದು ಎಂದು ರಾಜ್ಯ ಗೃಹ ಸಚಿವ ಅನಿಲ್ ವಿಜ್ ಹೇಳಿದ್ದಾರೆ.

ADVERTISEMENT

‘ಅಕ್ರಮ ಗಣಿಗಾರಿಕೆ ಮಾಫಿಯಾದಿಂದ ಸಾವಿಗೀಡಾದ ಡಿವೈಎಸ್‌ಪಿ ಸುರೇಂದ್ರ ಸಿಂಗ್‌ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. ಜತೆಗೆ, ಆ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ಕುರಿತು ತನಿಖೆ ನಡೆಸಲು ಸರ್ಕಾರ ನಿರ್ಧರಿಸಿದೆ’ ಎಂದು ವಿಜ್ ಟ್ವೀಟ್ ಮಾಡಿದ್ದಾರೆ.

‘ಸುರೇಂದ್ರ ಸಿಂಗ್‌ ಅವರ ತಂಡವು ದಾಖಲೆಗಳ ಪರಿಶೀಲನೆಗಾಗಿ ಗಣಿ ಪ್ರದೇಶದಿಂದ ಬರುತ್ತಿದ್ದ ಟ್ರಕ್‌ ಅನ್ನು ನಿಲ್ಲಿಸಲು ಮುಂದಾಗಿತ್ತು. ಈ ವೇಳೆ ಡಿವೈಎಸ್‌ಪಿ ಅವರ ಮೇಲೆ ಚಾಲಕನಟ್ರಕ್‌ ಹರಿಸಿ ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಸುರೇಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದಾಗಲೇಅವರು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದರು. ಸಿಂಗ್‌ ಅವರ ಜೊತೆಗಿದ್ದ ಗನ್‌ಮ್ಯಾನ್‌ ಹಾಗೂ ಚಾಲಕ ರಸ್ತೆ ಬದಿಗೆ ಜಿಗಿದು ಜೀವ ಉಳಿಸಿಕೊಂಡಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದರು.

ಪ್ರಕರಣದ ಪ್ರಮುಖ ಆರೋಪಿ ಸಬ್ಬೀರ್ ಅಲಿಯಾಸ್ ಮಿತ್ತರ್‌ನನ್ನು ರಾಜಸ್ಥಾನದ ಭರತ್‌ಪುರ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿ ಇಕ್ಕರ್‌ನನ್ನು ವಶಕ್ಕೆ ಪಡೆಯಲಾಗಿದೆ ಎಂದು ನೂಹ್‌ ಪೊಲೀಸರು ತಿಳಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಅಕ್ರಮ ಗಣಿಗಾರಿಕೆ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಿದೆ ಎಂದು ವಿಜ್ ತಿಳಿಸಿದ್ದಾರೆ.

ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದ ಕಾಂಗ್ರೆಸ್‌
‘ಡಿವೈಎಸ್‌ಪಿ ಸುರೇಂದ್ರ ಸಿಂಗ್‌ ಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಮುಖ್ಯಮಂತ್ರಿ ಮನೋಹರಲಾಲ್‌ ಖಟ್ಟರ್ ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಕಾಂಗ್ರೆಸ್‌ ಒತ್ತಾಯಿಸಿತ್ತು.

‘ಸುರೇಂದ್ರ ಸಿಂಗ್‌ ಹತ್ಯೆಯು ಇಡಿ ದೇಶವನ್ನೇ ತಲ್ಲಣಗೊಳಿಸಿದೆ. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಹೈಕೋರ್ಟ್‌ ಮೇಲ್ವಿಚಾರಣೆಯಲ್ಲೇ ತನಿಖೆ ನಡೆಸಬೇಕು’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಆಗ್ರಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.