ADVERTISEMENT

ಕಾಂಗ್ರೆಸ್ ಮುಂದಿವೆ ಹಲವು ಸವಾಲು: ‘ಇಂಡಿಯಾ’ ಕೂಟದಲ್ಲಿ ಕುಗ್ಗಿದ ಪ್ರಭಾವ

ಶಮಿನ್‌ ಜಾಯ್‌
Published 8 ಅಕ್ಟೋಬರ್ 2024, 23:30 IST
Last Updated 8 ಅಕ್ಟೋಬರ್ 2024, 23:30 IST
ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ   

ನವದೆಹಲಿ: ಒಂದು ದಶಕದ ಚುನಾವಣಾ ಹಿನ್ನಡೆಯ ನಂತರ ಲೋಕಸಭಾ ಚುನಾವಣೆಯ ಫಲಿತಾಂಶದಿಂದ ಕಾಂಗ್ರೆಸ್‌ ಆತ್ಮವಿಶ್ವಾಸ ಮರಳಿ ಪಡೆದಿತ್ತು. ಆದರೆ, ನಾಲ್ಕು ತಿಂಗಳ ನಂತರ ನಡೆದಿರುವ ಎರಡು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶವು ಪಕ್ಷಕ್ಕೆ ಸಂಭ್ರಮವನ್ನೇನೂ ತಂದಿಲ್ಲ. ಹರಿಯಾಣದಲ್ಲಿ ಮತ್ತೆ ಅಧಿಕಾರಕ್ಕೇರುವ ಅವಕಾಶವನ್ನು ಪಕ್ಷ ಕೈಚೆಲ್ಲಿದ್ದರೆ, ಜಮ್ಮು–ಕಾಶ್ಮೀರದಲ್ಲಿ ಮಿತ್ರಪಕ್ಷದ ಮೂಲಕ ಅಧಿಕಾರಕ್ಕೇರುವ ಹಾದಿಯಲ್ಲಿದ್ದರೂ, ಚುನಾವಣೆಯಲ್ಲಿ ಗಮನಾರ್ಹ ಸಾಧನೆ ಮಾಡುವಲ್ಲಿ ವಿಫಲವಾಗಿದೆ.

ಕಳೆದ ಲೋಕಸಭಾ ಚುನಾವಣೆಯ ಸಾಧನೆಯಿಂದ ಕಾಂಗ್ರೆಸ್‌, ಮಿತ್ರಪಕ್ಷಗಳಲ್ಲಿ ಗೌರವದ ಸ್ಥಾನ ಗಳಿಸಿತ್ತು. ಆದರೆ, ಈ ಚುನಾವಣಾ ಫಲಿತಾಂಶವು ‘ಇಂಡಿಯಾ’ ಕೂಟದಲ್ಲಿ ಪಕ್ಷದ ಪ್ರಭಾವವನ್ನು ಕುಗ್ಗಿಸಿದೆ. ಇದು ಮುಂಬರುವ ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳ ಚುನಾವಣೆಗಳ ಮೇಲೆ ಪರಿಣಾಮ ಬೀರಲಿದ್ದು, ವಾಸ್ತವ ಸ್ಥಿತಿಯನ್ನು ಗಮನಿಸಿ, ಹೆಚ್ಚು ಹೊಂದಾಣಿಕೆ ಮಾಡಿಕೊಳ್ಳುವಂತೆ ‘ಹಿರಿಯಣ್ಣ’ನನ್ನು ಒತ್ತಾಯಿಸಲು ಮಿತ್ರಪಕ್ಷಗಳಿಗೆ ಇದು ಅವಕಾಶ ಒದಗಿಸಿದೆ. 

ಉತ್ತರ ಪ್ರದೇಶದಲ್ಲಿ 10 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಅವುಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಪಕ್ಷಕ್ಕೆ ಬಿಟ್ಟುಕೊಡುವಂತೆ ಸಮಾಜವಾದಿ ಪಕ್ಷವನ್ನು ಒತ್ತಾಯಿಸುವ ಅವಕಾಶವನ್ನು ಕಾಂಗ್ರೆಸ್‌ ಕಳೆದುಕೊಳ್ಳುತ್ತಿದೆ ಎನ್ನುವುದನ್ನು ಮುಂಗಾಣಬಹುದಾಗಿದೆ. ಕಾಂಗ್ರೆಸ್ ಬಿಜೆಪಿಯೊಂದಿಗೆ ಏಕಾಂಗಿಯಾಗಿ ಸೆಣಸಲಾರದು ಎನ್ನುವ ನಿರೂಪಣೆ ವಾಸ್ತವವಲ್ಲ ಎನ್ನುವುದನ್ನೂ, ಲೋಕಸಭಾ ಚುನಾವಣೆಯ ಫಲಿತಾಂಶ ಅಪವಾದವಲ್ಲ ಎನ್ನುವುದನ್ನೂ ಸಾಬೀತುಪಡಿಸುವುದು ಪಕ್ಷಕ್ಕೆ ಸವಾಲಾಗಲಿದೆ.

ADVERTISEMENT

ಜತೆಗೆ, ಸಂಸತ್‌ನಲ್ಲಿ ಕಳೆದ ಕೆಲವು ತಿಂಗಳಲ್ಲಿ ವಿರೋಧ ಪಕ್ಷವು ಮೇಲುಗೈ ಸಾಧಿಸಿದ್ದು, ಅದು ಹಾಗೆಯೇ ಮುಂದುವರಿಯುವುದನ್ನು ಕಾಂಗ್ರೆಸ್ ಖಾತ್ರಿಪಡಿಸಿಕೊಳ್ಳಬೇಕಾಗಿದೆ ಮತ್ತು ಬಿಜೆಪಿ ಪುಟಿದೇಳದಂತೆ ತಡೆಯುವುದರ ಮುಖ್ಯ ಜವಾಬ್ದಾರಿಯೂ ಪಕ್ಷದ ಮೇಲಿದೆ. 

ಕಳೆದ ದಶಕದಲ್ಲಿ ಪುನರಾವರ್ತನೆಗೊಂಡಿದ್ದ ಪಕ್ಷದ ದೌರ್ಬಲ್ಯವು ಹರಿಯಾಣ ಮತ್ತು ಜಮ್ಮು–ಕಾಶ್ಮೀರದಲ್ಲಿ ಮತ್ತೊಮ್ಮೆ ಬಹಿರಂಗಗೊಂಡಿದೆ. ಪಕ್ಷವು ಲೋಕಸಭಾ ಚುನಾವಣೆಯ ಫಲಿತಾಂಶದ ನಿರೂಪಣೆಯನ್ನು ಬಲಪಡಿಸುವಲ್ಲಿ ಮತ್ತು ಜನರ ಆ ವಿಶ್ವಾಸವನ್ನು ಉಳಿಸಿಕೊಂಡು, ಅದರ ಲಾಭ ಪಡೆಯುವಲ್ಲಿ ವಿಫಲವಾಗಿದೆ; ಗುಂಪುಗಾರಿಕೆ, ಅಭ್ಯರ್ಥಿ ಆಯ್ಕೆಯಲ್ಲಿನ ಗೊಂದಲ ಮತ್ತು ಆಂತರಿಕ ಕಿತ್ತಾಟವನ್ನು ತಡೆಯದೇ ಹೋದದ್ದು ಪಕ್ಷಕ್ಕೆ ದುಬಾರಿಯಾಗಿ ಪರಿಣಮಿಸಿದೆ.

ಜಮ್ಮು–ಕಾಶ್ಮೀರದಲ್ಲಿ ಕಾಂಗ್ರೆಸ್ ಆರು ಸ್ಥಾನಗಳಿಗೆ ಕುಸಿದಿದ್ದು, ಬಿಜೆಪಿ ಪ್ರಮುಖ ವಿರೋಧಿಯಾಗಿದ್ದ ಜಮ್ಮು ಪ್ರಾಂತ್ಯದಲ್ಲಿ ಕೇವಲ ಒಂದು ಸ್ಥಾನ ಗಳಿಸಿದೆ. ನ್ಯಾಷನಲ್ ಕಾನ್ಫರೆನ್ಸ್ ಜತೆ ಜಗಳ ಮಾಡಿಕೊಂಡಿದ್ದ ಪಕ್ಷವು ಕಾಶ್ಮೀರ ಕಣಿವೆಯ ಆರು ಸ್ಥಾನಗಳಿಗೆ ಹೊಂದಾಣಿಕೆಯ ಹೋರಾಟ ನಡೆಸಿತ್ತು. ರಾಹುಲ್ ಗಾಂಧಿ ಅವರ ಭಾರತ್ ಜೋಡೊ ಯಾತ್ರೆಯ ಮೇಲೆ ಪಕ್ಷವು ಭರವಸೆ ಹೊಂದಿತ್ತು.

ಬಿಜೆಪಿಯಂತೆ ಕಾಂಗ್ರೆಸ್ ಕೂಡ 370ನೇ ವಿಧಿಯಂತಹ ವಿವಾದಾತ್ಮಕ ಅಂಶಗಳ ಬಗ್ಗೆ ಚುನಾವಣೆಯಲ್ಲಿ ಪ್ರಸ್ತಾಪಿಸಲಿಲ್ಲ. ಪಕ್ಷೇತರರನ್ನು ಮತ್ತು ಬಿಜೆಪಿಗೆ ಹತ್ತಿರ ಇರುವ ಮತ್ತು ಅದರ ಬದಲಿಯಂತೆ ಇರುವ ಪಕ್ಷಗಳನ್ನು ತಿರಸ್ಕರಿಸಿರುವ ಕಣಿವೆಯ ಮತದಾರರು, ನ್ಯಾಷನಲ್ ಕಾನ್ಫರೆನ್ಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ.

ಜಮ್ಮು–ಕಾಶ್ಮೀರದಲ್ಲಿ ಕಾಂಗ್ರೆಸ್ ಕಿರಿಯ ಮಿತ್ರ ಪಕ್ಷವಾಗಿದ್ದರೆ, ಹರಿಯಾಣದಲ್ಲಿ ಹಿರಿಯ ಮಿತ್ರಪಕ್ಷವಾಗಿತ್ತು. ಆದರೆ, ‘ಇಂಡಿಯಾ’ ಕೂಟದ ಮಿತ್ರಪಕ್ಷಗಳನ್ನು ಜತೆಗೆ ಸೇರಿಸಿಕೊಳ್ಳುವ ವಿಚಾರದಲ್ಲಿ ಎಡವಿತು; ಸಿ‍ಪಿಎಂಗೆ ಒಂದು ಸ್ಥಾನ ನೀಡಿತು. ಎಎಪಿ ಮತ್ತು ಸಿಪಿಐ ಮಾತುಕತೆಗೆ ಬಂದರೂ, ಆ ಪಕ್ಷಗಳಿಗೆ ರಾಜ್ಯದಲ್ಲಿ ನೆಲೆ ಇಲ್ಲ ಎನ್ನುವ ಕಾರಣ ನೀಡಿ ಪಕ್ಷವು ಮೊಂಡುತನ ಪ್ರದರ್ಶಿಸಿತು.    

ಪಕ್ಷದಲ್ಲಿ ಮಾಜಿ ಮುಖ್ಯಮಂತ್ರಿ, ಜಾಟ್ ಸಮುದಾಯದ ಭೂಪಿಂದರ್ ಹೂಡಾ ಬಣದವರು 70ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಮೂಲಕ ಮೇಲುಗೈ ಸಾಧಿಸಿದರೆ, ದಲಿತ ಸಮುದಾಯದ ಕುಮಾರಿ ಸೆಲ್ಜಾ ಬಣವನ್ನು ಕಡೆಗಣಿಸಲಾಗಿತ್ತು. ವರಿಷ್ಠರ ವಿರುದ್ಧ ಮುನಿಸಿಕೊಂಡಿದ್ದ ಕುಮಾರಿ ಸೆಲ್ಜಾ ಆರಂಭದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ಕೆ ಬಾರದೇ ಇದ್ದುದು ಪಕ್ಷಕ್ಕೆ ಹೊಡೆತ ನೀಡಿತು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆಗಿದ್ದ ದಲಿತರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯತ್ತ ವಾಲಿದರು.

ಹರಿಯಾಣದ ಫಲಿತಾಂಶವು ಹೂಡಾ ಅವರಿಗೂ ಒಂದು ಪಾಠವಾಗಿದ್ದು, ‘ಒಬ್ಬ ವ್ಯಕ್ತಿ, ಒಂದು ಜಾತಿ’ ಪ್ರಾಬಲ್ಯವು ಕೆಲಸಕ್ಕೆ ಬಾರದು ಎನ್ನುವ ಸಂದೇಶ ರವಾನಿಸಿದೆ. ಬಿಜೆಪಿ ‍ಪ್ರಾಬಲ್ಯ ಸಾಧಿಸಿದರೆ ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ನಿರ್ಬಂಧಿಸಲಾಗುತ್ತದೆ ಎನ್ನುವ ಭಯದಿಂದ ರಾಜ್ಯದ ಮತದಾರರು ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಇದೇ ರೀತಿ ಸೋಲಿಸಿದ್ದರು.

ಪಕ್ಷದಲ್ಲಿ ತೀವ್ರಗೊಂಡಿದ್ದ ಗುಂಪುಗಾರಿಕೆ ಮತ್ತು ಚುನಾವಣಾ ನಿರೂಪಣೆ ರೂಪಿಸುವುದು ಸೇರಿದಂತೆ ಹಲವು ವಿಚಾರಗಳಲ್ಲಿ ಪಕ್ಷದಲ್ಲಿ ಹೊಂದಾಣಿಕೆ ಇಲ್ಲದಿರುವ ಬಗ್ಗೆ ರಾಹುಲ್ ಗಾಂಧಿ ಅವರು ಬೇಸತ್ತಿದ್ದರು ಎನ್ನಲಾಗುತ್ತಿದೆ. ಇದೇನೇ ಇದ್ದರೂ, ಅವರು ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ. ಹೂಡಾ ಅವರು ಸೇರಿದಂತೆ ಸ್ಥಳೀಯ ನಾಯಕರನ್ನು ನಿಯಂತ್ರಿಸಲು ಅವರು ಮುಂದಾಗಲಿಲ್ಲ. ಚುನಾವಣಾ ಫಲಿತಾಂಶದಲ್ಲಿ ಹಿನ್ನಡೆಯಾಗಿರುವುದು ಒಂದು ಕಡೆ ಆದರೆ, ಇದು ಅವರ ವಿರೋಧ ಪಕ್ಷದ ನಾಯಕನ ಸ್ಥಾನದ ಮೇಲೆ ಪರಿಣಾಮ ಬೀರುವುದೇ ಎನ್ನುವ ಪ್ರಶ್ನೆಯೂ ಹುಟ್ಟಿಕೊಂಡಿದೆ.

 ‘ಒಬ್ಬ ವ್ಯಕ್ತಿ, ಒಂದು ಜಾತಿ’ಗೆ ಸೋಲು: ಹೂಡಾಗೆ ಪಾಠ

ಫಲಿತಾಂಶವು ಹೂಡಾ ಅವರಿಗೂ ಒಂದು ಪಾಠವಾಗಿದ್ದು, ‘ಒಬ್ಬ ವ್ಯಕ್ತಿ, ಒಂದು ಜಾತಿ’ ಪ್ರಾಬಲ್ಯವು ಕೆಲಸಕ್ಕೆ ಬಾರದು ಎನ್ನುವ ಸಂದೇಶ ರವಾನಿಸಿದೆ. ಬಿಜೆಪಿ ‍ಪ್ರಾಬಲ್ಯ ಸಾಧಿಸಿದರೆ ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ನಿರ್ಬಂಧಿಸಲಾಗುತ್ತದೆ ಎನ್ನುವ ಭಯದಿಂದ ಮತದಾರರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಇದೇ ರೀತಿ ಸೋಲಿಸಿದ್ದರು.

ಪಕ್ಷದಲ್ಲಿ ತೀವ್ರಗೊಂಡಿದ್ದ ಗುಂಪುಗಾರಿಕೆ ಮತ್ತು ಚುನಾವಣಾ ನಿರೂಪಣೆ ರೂಪಿಸುವುದು ಸೇರಿದಂತೆ ಹಲವು ವಿಚಾರಗಳಲ್ಲಿ ಪಕ್ಷದಲ್ಲಿ ಹೊಂದಾಣಿಕೆ ಇಲ್ಲದಿರುವ ಬಗ್ಗೆ ರಾಹುಲ್ ಗಾಂಧಿ ಅವರು ಬೇಸತ್ತಿದ್ದರು ಎನ್ನಲಾಗುತ್ತಿದೆ. ಇದೇನೇ ಇದ್ದರೂ, ಅವರು ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ. ಹೂಡಾ ಸೇರಿದಂತೆ ಸ್ಥಳೀಯ ನಾಯಕರನ್ನು ನಿಯಂತ್ರಿಸಲು ಅವರು ಮುಂದಾಗಲಿಲ್ಲ. ಫಲಿತಾಂಶದಲ್ಲಿ ಹಿನ್ನಡೆಯಾಗಿರುವುದು ಒಂದು ಕಡೆ ಆದರೆ, ಇದು ಅವರ ವಿರೋಧ ಪಕ್ಷದ ನಾಯಕನ ಸ್ಥಾನದ ಮೇಲೆ ಪರಿಣಾಮ ಬೀರುವುದೇ ಎನ್ನುವ ಪ್ರಶ್ನೆಯೂ ಹುಟ್ಟಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.