ಕುರುಕ್ಷೇತ್ರ (ಹರಿಯಾಣ): ಜಿಲ್ಲೆಯ ಪಿಪ್ಲಿಯಲ್ಲಿ ಸೂರ್ಯಕಾಂತಿ ಬೀಜಕ್ಕೆ ಬೆಂಬಲ ಬೆಲೆ ಮತ್ತು ಇತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಮಹಾಪಂಚಾಯತ್‌ನಲ್ಲಿ ಭಾಗವಹಿಸಲು ಸೋಮವಾರ ಹೆಚ್ಚಿನ ಸಂಖ್ಯೆಯ ರೈತರು ಜಮಾಯಿಸಿದ್ದರು.
ಭಾರತೀಯ ಕಿಸಾನ್ ಯೂನಿಯನ್ (ಚಾರುಣಿ) ಕರೆ ನೀಡಿರುವ ‘ಎಂಎಸ್‌ಪಿ ದಿಲಾವೋ, ಕಿಸಾನ್ ಬಚಾವೋ ಮಹಾಪಂಚಾಯತ್’ ಪಿಪ್ಲಿಯ ಧಾನ್ಯ ಮಾರುಕಟ್ಟೆಯ ಬಳಿ ನಡೆಯುತ್ತಿದೆ. ಕೆಲವು ದಿನಗಳ ಹಿಂದೆ ಸೂರ್ಯಕಾಂತಿ ಬೀಜಗಳಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ರೈತರು ರಾಷ್ಟ್ರೀಯ ಹೆದ್ದಾರಿ–44 ರಲ್ಲಿ ಪ್ರತಿಭಟನೆ ನಡೆಸಿದ್ದರು.
ಭಾರತೀಯ ಕಿಸಾನ್ ಯೂನಿಯನ್ (ಚಾರುಣಿ) ಮುಖ್ಯಸ್ಥ ಗುರ್ನಾಮ್ ಸಿಂಗ್ ಚಾರುಣಿ ನೇತೃತ್ವದ ರೈತರು ಜೂನ್ 6 ರಂದು ಶಹಾಬಾದ್ ಬಳಿ ಆರು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಸರ್ಕಾರವು ಸೂರ್ಯಕಾಂತಿ ಬೀಜಗಳನ್ನು ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಖರೀದಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿ, ಲಾಠಿ ಚಾರ್ಜ್ ನಡೆಸಿದರು.
ನಂತರ, ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷರು ಸೇರಿದಂತೆ ಒಂಬತ್ತು ನಾಯಕರನ್ನು ಗಲಭೆ ಮತ್ತು ಕಾನೂನುಬಾಹಿರ ಸಭೆ ಸೇರಿದಂತೆ ವಿವಿಧ ಆರೋಪಗಳ ಮೇಲೆ ಬಂಧಿಸಲಾಯಿತು.
ಮಹಾಪಂಚಾಯತ್ ಅನ್ನು ಉದ್ದೇಶಿಸಿ ಮಾತನಾಡಿದ ಕೆಲವು ರೈತ ಮುಖಂಡರು, ಸರ್ಕಾರದ ‘ರೈತ ವಿರೋಧಿ’ ನೀತಿಗಳು ಮತ್ತು ರೈತ ನಾಯಕರ ವಿರುದ್ಧದ ಪೊಲೀಸ್ ಕ್ರಮಗಳನ್ನು ಟೀಕಿಸಿದರು. ಸರ್ಕಾರವು ಸೂರ್ಯಕಾಂತಿ ಬೀಜಗಳನ್ನು ಎಂಎಸ್‌ಸಿ ದರದಲ್ಲಿ ಖರೀದಿಸಬೇಕು ಮತ್ತು ಇತ್ತೀಚೆಗೆ ಶಹಾಬಾದ್‌ನಲ್ಲಿ ಬಂಧಿಸಲಾದ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಮಹಾಪಂಚಾಯತ್ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ಬಿಕೆಯು ಮುಖಂಡರು ಭಾನುವಾರ ರಾತ್ರಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಶನಿವಾರ 36,414 ಎಕರೆಯಲ್ಲಿ ಬೆಳೆದ ಸೂರ್ಯಕಾಂತಿಗೆ 8,528 ರೈತರಿಗೆ ಮಧ್ಯಂತರ ಪರಿಹಾರವಾಗಿ ₹29.13 ಕೋಟಿಯನ್ನು ಪರಿಹಾರವಾಗಿ ಘೋಷಿಸಿದ್ದರು. ಆದರೆ, ರಾಜ್ಯ ಸರ್ಕಾರವು ಪ್ರತಿ ಕ್ವಿಂಟಾಲ್‌ಗೆ ₹6,400 ಎಂಎಸ್‌ಪಿ ದರದಲ್ಲಿ ಸೂರ್ಯಕಾಂತಿ ಖರೀದಿಸಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.
ಭಾವಂತರ್ ಭರ್ಪೈ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರವು ಎಂಎಸ್‌ಪಿಗಿಂತ ಕಡಿಮೆ ಮಾರಾಟವಾದ ಸೂರ್ಯಕಾಂತಿ ಬೆಳೆಗೆ ಮಧ್ಯಂತರ ಬೆಂಬಲವಾಗಿ ಪ್ರತಿ ಕ್ವಿಂಟಲ್‌ಗೆ ₹1,000 ನೀಡುತ್ತಿದೆ.
ವಿವಿಧ ಖಾಪ್‌ಗಳ ನಾಯಕರು ಮತ್ತು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್, ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ ಮಹಾಪಂಚಾಯತ್‌ನಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.