ಚಂಡೀಗಢ: ಇತ್ತೀಚೆಗೆ ನಿಧನರಾದ ಹರಿಯಾಣದ 56 ವರ್ಷದ ಶ್ವಾಸಕೋಶದ ಕ್ಯಾನ್ಸರ್ ಪೀಡಿತ ರೋಗಿಯೊಬ್ಬರಿಗೆ ಜನವರಿಯಲ್ಲಿ H3N2 ವೈರಸ್ ದೃಢಪಟ್ಟಿತ್ತು ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
‘ಪ್ರಾಥಮಿಕ ಮಾಹಿತಿ ಪ್ರಕಾರ, ಫೆಬ್ರುವರಿ 8ರಂದು ಮೃತಪಟ್ಟ 56 ವರ್ಷದ ಜಿಂದ್ ಜಿಲ್ಲೆಯ ಶ್ವಾಸಕೋಶ ಕ್ಯಾನ್ಸರ್ ಪೀಡಿತ ವ್ಯಕ್ತಿಗೆ ಜನವರಿ 17ರಂದು ರೋಹ್ಟಕ್‌ನ ಪಿಜಿಐಎಂಎಸ್ ಆಸ್ಪತ್ರೆಯಲ್ಲಿ ಎಚ್3ಎನ್2 ದೃಢಪಟ್ಟಿತ್ತು’ಎಂದು ಅಧಿಕಾರಿ ತಿಳಿಸಿದ್ದಾರೆ.
ಯಾವುದೇ ಪರಿಸ್ಥಿತಿಯನ್ನು ಎದುರಿಸಲು ತಮ್ಮ ಇಲಾಖೆ ಸಂಪೂರ್ಣ ಸಿದ್ಧವಾಗಿದೆ ಮತ್ತು ಜನರು ಭಯಪಡುವ ಅಗತ್ಯವಿಲ್ಲ ಎಂದು ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಹೇಳಿದ್ದಾರೆ.
ರಾಜ್ಯದಲ್ಲಿ ಈವರೆಗೆ 10 ಮಂದಿಗೆ ಎಚ್3ಎನ್2 ಸೋಂಕು ತಗುಲಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಅವರು ಜಿಂದ್ ನಿವಾಸಿಯಾಗಿದ್ದು, ಶ್ವಾಸಕೋಶದ ಕ್ಯಾನ್ಸರ್ ಇತ್ತು ಎಂದು ಸಚಿವರು ಹೇಳಿದ್ದಾರೆ.
‘ಆ ರೋಗಿಯ ಸಾವು ಕ್ಯಾನ್ಸರ್ ಅಥವಾ H3N2 ವೈರಸ್‌ನಿಂದ ಆಗಿದೆಯೇ ಎಂಬ ಕುರಿತು ತನಿಖೆ ಮಾಡಲು ನಾವು ಆರೋಗ್ಯ ಇಲಾಖೆಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ' ಎಂದು ವಿಜ್ ಹೇಳಿದರು.
ಕಳೆದ ವಾರ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನೀಡಿರುವ ಸಲಹೆಯಲ್ಲಿ, H3N2 ವೈರಸ್‌ನ ರೋಗಲಕ್ಷಣಗಳಿದ್ದರೆ ಸಾಬೂನು ಬಳಸಿ ಕೈಗಳನ್ನು ತೊಳೆಯುವುದು, ಮಾಸ್ಕ್ ಧರಿಸುವುದು ಮತ್ತು ಜನನಿಬಿಡ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸುವುದು, ಸೀನುವಾಗ ಮತ್ತು ಕೆಮ್ಮುವಾಗ ಬಾಯಿ ಹಾಗೂ ಮೂಗನ್ನು ಮುಚ್ಚಿಕೊಳ್ಳುವಂತೆ ಜನರಿಗೆ ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.