ನವದೆಹಲಿ /ಚಂಡೀಗಢ: ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಮತ್ತು ಇತರ ಕೆಲವು ಬೇಡಿಕೆಗಳ ಈಡೇರಿಕೆಗೆ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕಿಸಾನ್ ಮಜ್ದೂರ್ ಮೋರ್ಚಾ ಕರೆ ನೀಡಿರುವ ‘ದೆಹಲಿ ಚಲೋ’ ಪ್ರತಿಭಟನೆಯು ಇಂದು (ಶನಿವಾರ) ಐದನೇ ದಿನಕ್ಕೆ ಕಾಲಿರಿಸಿದೆ.
ಇದೇ ಸಂದರ್ಭದಲ್ಲಿ ಹರಿಯಾಣದ ಅಂಬಾಲಾ ಬಳಿಯ ಶಂಭು ಗಡಿಯಲ್ಲಿ ಭದ್ರತಾ ಸಿಬ್ಬಂದಿಯನ್ನು ಕೆರಳಿಸಲು ಯತ್ನಿಸಿದ ಹಾಗೂ ಕಲ್ಲು ತೂರಾಟ ನಡೆಸುತ್ತಿರುವ ರೈತರ ವಿಡಿಯೊ ತುಣುಕುಗಳನ್ನು ಹರಿಯಾಣ ಪೊಲೀಸರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ರೈತರ ಆಂದೋಲನದ ನೆಪದಲ್ಲಿ ‘ಗಲಭೆ’ ನಡೆಸಿ ಅಶಾಂತಿ ಸೃಷ್ಟಿಸಲು ಅವಕಾಶ ನೀಡುವುದಿಲ್ಲ ಎಂದು ‘ಎಕ್ಸ್’ನಲ್ಲಿ ಪೊಲೀಸರು ಪೋಸ್ಟ್ ಮಾಡಿದ್ದಾರೆ.
ಮುಖಕ್ಕೆ ಬಟ್ಟೆ ಕಟ್ಟಿಕೊಂಡಿರುವ ಪ್ರತಿಭಟನಾಕಾರರು ಭದ್ರತಾ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಈ ಘರ್ಷಣೆಯಲ್ಲಿ 18 ಮಂದಿ ಪೊಲೀಸರು ಮತ್ತು ಏಳು ಅರೆಸೇನಾ ಪಡೆಯ ಯೋಧರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರೈತರು ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಭರವಸೆ ನೀಡಿದ್ದರು. ಆದರೆ, ಪೊಲೀಸರನ್ನು ಪ್ರಚೋದಿಸಲು ಪ್ರತಿಭಟನಾಕಾರರು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ದೆಹಲಿ ಕಡೆ ಸಾಗಲು ಯತ್ನಿಸುತ್ತಿರುವ ಪಂಜಾಬ್ ರೈತರನ್ನು ಪಂಜಾಬ್–ಹರಿಯಾಣ ನಡುವಿನ ಶಂಭು ಮತ್ತು ಖಾನೌರಿ ಗಡಿಯಲ್ಲಿ ಪೊಲೀಸರು ತಡೆದಿದ್ದಾರೆ. ಮಂಗಳವಾರದಿಂದಲೂ ರೈತರು ಈ ಎರಡು ಗಡಿಗಳಲ್ಲಿ ಬೀಡು ಬಿಟ್ಟಿದ್ದಾರೆ.
ಶಂಭು ಗಡಿಯ ಕಡೆ ಸಾಗಲು ಯತ್ನಿಸಿದ ರೈತರನ್ನು ಚದುರಿಸಲು ಹರಿಯಾಣ ಪೊಲೀಸರು ಶುಕ್ರವಾರ ಅಶ್ರುವಾಯು ಶೆಲ್ ಸಿಡಿಸಿದರು. ರೈತರ ಪ್ರತಿನಿಧಿಗಳು ಹಾಗೂ ಕೇಂದ್ರ ಸರ್ಕಾರದ ಜೊತೆ ಗುರುವಾರ ನಡೆದ ಮಾತುಕತೆಯು ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಎರಡೂ ಕಡೆಯವರು ನಾಳೆ (ಭಾನುವಾರ) ಮತ್ತೆ ಸಭೆ ಸೇರಲಿದ್ದಾರೆ. ಫೆಬ್ರುವರಿ 8, 12 ಮತ್ತು 15ರಂದು ಮಾತುಕತೆ ನಡೆದಿವೆ. ಯಾವ ಸಭೆಯಲ್ಲಿಯೂ ತೀರ್ಮಾನವೊಂದಕ್ಕೆ ಬರಲು ಸಾಧ್ಯವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.