ಚಂಡೀಗಢ: ಶಂಭು ಗಡಿಯ ಕಡೆ ಸಾಗಲು ಯತ್ನಿಸಿದ ರೈತರನ್ನು ಚದುರಿಸಲು ಹರಿಯಾಣ ಪೊಲೀಸರು ಶುಕ್ರವಾರ ಅಶ್ರುವಾಯು ಶೆಲ್ ಸಿಡಿಸಿದರು. ರೈತರ ಪ್ರತಿನಿಧಿಗಳು ಹಾಗೂ ಕೇಂದ್ರ ಸರ್ಕಾರದ ಜೊತೆ ಗುರುವಾರ ನಡೆದ ಮಾತುಕತೆಯು ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಎರಡೂ ಕಡೆಯವರು ಭಾನುವಾರ ಮತ್ತೆ ಸಭೆ ಸೇರಲಿದ್ದಾರೆ.
ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಮತ್ತು ಇತರ ಕೆಲವು ಬೇಡಿಕೆಗಳ ಈಡೇರಿಕೆಗೆ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕಿಸಾನ್ ಮಜ್ದೂರ್ ಮೋರ್ಚಾ ಕರೆ ನೀಡಿರುವ ‘ದೆಹಲಿ ಚಲೋ’ ಪ್ರತಿಭಟನೆಯು ಶುಕ್ರವಾರ ನಾಲ್ಕನೆಯ ದಿನಕ್ಕೆ ಕಾಲಿರಿಸಿತು.
ಭಾನುವಾರ ನಡೆಯಲಿರುವುದು ನಾಲ್ಕನೆಯ ಸುತ್ತಿನ ಸಭೆ. ಫೆಬ್ರುವರಿ 8, 12 ಮತ್ತು 15ರಂದು ಮಾತುಕತೆ ನಡೆದಿವೆ. ಯಾವ ಸಭೆಯಲ್ಲಿಯೂ ತೀರ್ಮಾನವೊಂದಕ್ಕೆ ಬರಲು ಸಾಧ್ಯವಾಗಿಲ್ಲ.
ದೆಹಲಿ ಕಡೆ ಸಾಗಲು ಯತ್ನಿಸುತ್ತಿರುವ ಪಂಜಾಬ್ ರೈತರನ್ನು ಪಂಜಾಬ್–ಹರಿಯಾಣ ನಡುವಿನ ಶಂಭು ಮತ್ತು ಖಾನೌರಿ ಗಡಿಯಲ್ಲಿ ಪೊಲೀಸರು ತಡೆದಿದ್ದಾರೆ. ಮಂಗಳವಾರದಿಂದಲೂ ರೈತರು ಈ ಎರಡು ಗಡಿಗಳಲ್ಲಿ ಬೀಡು ಬಿಟ್ಟಿದ್ದಾರೆ.
ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಮಾತ್ರವೇ ಅಲ್ಲದೆ, ಸ್ವಾಮಿನಾಥನ್ ಆಯೋಗದ ವರದಿಯ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ. ರೈತರಿಗೆ ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ ನೀಡಬೇಕು, ಕೃಷಿ ಸಾಲ ಮನ್ನಾ ಮಾಡಬೇಕು, ವಿದ್ಯುತ್ ಶುಲ್ಕ ಹೆಚ್ಚಿಸಬಾರದು ಎಂಬ ಬೇಡಿಕೆಗಳನ್ನೂ ರೈತರು ಸರ್ಕಾರದ ಮುಂದೆ ಇರಿಸಿದ್ದಾರೆ.
ಗುರುವಾರದ ಸಭೆಯಲ್ಲಿ ಕೇಂದ್ರ ಸಚಿವರಾದ ಅರ್ಜುನ್ ಮುಂಡಾ, ಪೀಯೂಷ್ ಗೋಯಲ್ ಮತ್ತು ನಿತ್ಯಾನಂದ ರಾಯ್ ಅವರು ಪಾಲ್ಗೊಂಡಿದ್ದರು. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಅಲ್ಲಿನ ಹಣಕಾಸು ಸಚಿವ ಹರಪಾಲ್ ಸಿಂಗ್ ಚೀಮಾ ಅವರೂ ಸಭೆಯಲ್ಲಿದ್ದರು. ಐದು ತಾಸು ಮಾತುಕತೆ ನಡೆಯಿತು. ಸಭೆಯ ನಂತರ ಮುಂಡಾ ಅವರು, ‘ಒಟ್ಟಾಗಿ ಕುಳಿತು ನಾವು ಒಂದು ಪರಿಹಾರ ಕಂಡುಕೊಳ್ಳುತ್ತೇವೆ’ ಎಂದು ತಿಳಿಸಿದರು.
ರೈತರ ಬೇಡಿಕೆಗಳ ಕುರಿತು ವಿಸ್ತೃತ ಚರ್ಚೆ ನಡೆದಿದೆ. ತುಸು ಕಾಲಾವಕಾಶ ಬೇಕು ಎಂದು ಕೇಂದ್ರದ ಪ್ರತಿನಿಧಿಗಳು ಹೇಳಿದ್ದಾರೆ ಎಂದು ರೈತ ಮುಖಂಡ ಸರವಣ್ ಸಿಂಗ್ ಪಂಡೇರ್ ತಿಳಿಸಿದರು.
ಶಂಭು ಮತ್ತು ಖಾನೌರಿ ಗಡಿಗಳಲ್ಲಿ ರೈತರ ಮೇಲೆ ಅರೆಸೇನಾ ಪಡೆಗಳು ಅಶ್ರುವಾಯು ಶೆಲ್ ಸಿಡಿಸಿದ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪ ಮಾಡಲಾಗಿದೆ ಎಂದು ಪಂಡೇರ್ ತಿಳಿಸಿದರು. ಶೆಲ್‌ಗಳನ್ನು ಸಚಿವರಿಗೆ ಸಭೆಯಲ್ಲಿ ತೋರಿಸಲಾಯಿತು ಎಂದರು.
ದಿನದ ಬೆಳವಣಿಗೆಗಳು
*ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ 63 ವರ್ಷ ವಯಸ್ಸಿನ ರೈತ ಗ್ಯಾನ್ ಸಿಂಗ್ ಅವರು ಶಂಭು ಗಡಿಯಲ್ಲಿ ಹೃದಯಾಘಾತದಿಂದ ಶುಕ್ರವಾರ ಮೃತಪಟ್ಟಿದ್ದಾರೆ. ಸಿಂಗ್ ಅವರು ಪಂಜಾಬ್‌ನ ಗುರುದಾಸಪುರ ಜಿಲ್ಲೆಯವರು. ಶುಕ್ರವಾರ ಬೆಳಿಗ್ಗೆ ಅವರಿಗೆ ಎದೆನೋವು ಕಾಣಿಸಿಕೊಂಡಿತು. ಅವರನ್ನು ರಾಜಪುರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಅಲ್ಲಿಂದ, ಪಟಿಯಾಲದ ರಾಜಿಂದ್ರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಗೆ ತಲುಪುವ ಮೊದಲೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದರು.
* ರೈತರ ಸಾಮಾಜಿಕ ಜಾಲತಾಣ ಖಾತೆಗಳನ್ನು ಕೇಂದ್ರ ಸರ್ಕಾರ ಅಮಾನತಿನಲ್ಲಿ ಇರಿಸಿದೆ ಎಂದು ರೈತ ಮುಖಂಡ ಸರವಣ್ ಸಿಂಗ್ ಪಂಡೇರ್ ಆರೋಪಿಸಿದ್ದಾರೆ. ರೈತರ ಪ್ರತಿಭಟನೆ ಬಗ್ಗೆ ಮಾಹಿತಿ ಪ್ರಸಾರ ಮಾಡುತ್ತಿದ್ದ ಅಂದಾಜು 70 ಯೂಟ್ಯೂಬರ್‌ಗಳ ಖಾತೆಗಳು ಕೂಡ ಅಮಾನತಾಗಿವೆ ಎಂದು ದೂರಿದ್ದಾರೆ.
* ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿಯನ್ನು ನೀಡದಿರುವುದು ಏಕೆ ಎಂಬ ಪ್ರಶ್ನೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮುಂದಿರಿಸಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಸ್ವಾಮಿನಾಥನ್ ಆಯೋಗದ ವರದಿ ಬಗ್ಗೆ ಒಮ್ಮತವನ್ನು ರೂಪಿಸುವ ಕೆಲಸ ನಡೆದಿತ್ತು ಎಂದು ರಮೇಶ್ ಹೇಳಿದ್ದಾರೆ.
* ಶಂಭು ಗಡಿಯಲ್ಲಿ ರೈತರು ಕಲ್ಲು ತೂರಾಟದಲ್ಲಿ ತೊಡಗಿರುವ ಹಾಗೂ ಭದ್ರತಾ ಸಿಬ್ಬಂದಿಯನ್ನು ಪ್ರಚೋದಿಸಲು ಯತ್ನಿಸುತ್ತಿರುವ ವಿಡಿಯೊಗಳನ್ನು ಹರಿಯಾಣ ಪೊಲೀಸರು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ.
ಶಾಂತಿಯುತ ಬಂದ್, ಕೆಲವೆಡೆ ನೀರಸ
ಫಿರೋಜ್‌ಪುರ/ಅಮೃತಸರ/ಹಿಸಾರ್/ಮುಜಫರ್‌ನಗರ: ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ್ದ ‘ಭಾರತ್ ಬಂದ್’ ಪರಿಣಾಮವಾಗಿ ಪಂಜಾಬ್‌ನಲ್ಲಿ ಬಸ್ಸುಗಳು ರಸ್ತೆಗೆ ಇಳಿಯಲಿಲ್ಲ. ಇದರಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸಿದರು. ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಸೇರಿದಂತೆ ರೈತರ ವಿವಿಧ ಬೇಡಿಕೆಗಳಿಗೆ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ತರಲು ಸಂಘಟನೆಯು ಬಂದ್‌ಗೆ ಕರೆ ನೀಡಿತ್ತು.
ರಾಜ್ಯದ ಹಲವೆಡೆ ಮಾರುಕಟ್ಟೆಗಳು ಹಾಗೂ ವಾಣಿಜ್ಯ ಘಟಕಗಳು ಬಂದ್ ಆಗಿದ್ದವು. ಹಲವೆಡೆ ಪ್ರತಿಭಟನೆ ನಡೆಸಿದ ರೈತರು ಪಠಾಣ್‌ಕೋಟ್, ತರನ್ ತಾರನ್, ಬಠಿಂಡಾ ಮತ್ತು ಜಲಂಧರ್‌ನಲ್ಲಿ ರಸ್ತೆ ತಡೆ ನಡೆಸಿದರು. ತಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪಂಜಾಬ್‌ನಲ್ಲಿ ರಸ್ತೆ ಸಾರಿಗೆ ಸಂಸ್ಥೆಗಳ ವಿವಿಧ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿದ್ದವು. ಹರಿಯಾಣದಲ್ಲಿ ಬಂದ್ ಕರೆಗೆ ಭಾಗಶಃ ಬೆಂಬಲ ವ್ಯಕ್ತವಾಯಿತು. ಬಂದ್ ಶಾಂತಿಯುತವಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಹರಿಯಾಣ ರೋಡ್‌ವೇಸ್‌ನ ನೌಕರರು ಬಂದ್‌ಗೆ ಬೆಂಬಲ ನೀಡಿದ ಪರಿಣಾಮವಾಗಿ ಹಿಸಾರ್‌ನಲ್ಲಿ ಸಾರಿಗೆ ಸೇವೆಗಳಿಗೆ ಅಡ್ಡಿ ಉಂಟಾಯಿತು. ಹರಿಯಾಣದ ಹಲವೆಡೆ ಟೋಲ್ ವಸೂಲಾತಿ ಕೇಂದ್ರಗಳ ಬಳಿ ರೈತರು ಧರಣಿ ನಡೆಸಿದರು, ಟೋಲ್ ಸಂಗ್ರಹಿಸಲು ಅವಕಾಶ ಕೊಡಲಿಲ್ಲ. ಉತ್ತರ ಪ್ರದೇಶದ ಮುಜಫ್ಫರ್‌ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಪಾಲ್ಗೊಂಡಿದ್ದರು. ದೆಹಲಿಗೆ ತೆರಳುವ ತಮ್ಮ ಆಲೋಚನೆಯ ಬಗ್ಗೆ ಪ್ರಶ್ನಿಸಿದಾಗ ಟಿಕಾಯತ್ ಅವರು, ‘ಶನಿವಾರ ಸಿಸೌಲಿಯಲ್ಲಿ ಸಭೆ ಇದೆ. ಮುಂದಿನ ಕ್ರಮವನ್ನು ಅಲ್ಲಿ ತೀರ್ಮಾನಿಸಲಾಗುತ್ತದೆ’ ಎಂದು ತಿಳಿಸಿದರು.
ಹರಿಯಾಣದ ಕುರುಕ್ಷೇತ್ರದಲ್ಲಿ ಬಂದ್‌ಗೆ ಸ್ಪಂದನ ಇರಲಿಲ್ಲ. ಉತ್ತರ ಪ್ರದೇಶದ ಬಿಜನೌರ್‌ನಲ್ಲಿ ರೈತರು ಕಬ್ಬು ತೂಕಮಾಡುವ ಕೇಂದ್ರಗಳಲ್ಲಿ ಕೆಲಸಕ್ಕೆ ಅಡ್ಡಿ ಉಂಟುಮಾಡಿದರು. ಉತ್ತರ ಪ್ರದೇಶದ ಶಹಜಹಾನಪುರ, ಬದಾಯೂಂನಲ್ಲಿ ಬಂದ್ ಪರಿಣಾಮ ಇರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.