ADVERTISEMENT

Haryana Polls | ಪಕ್ಷ ಅಧಿಕಾರಕ್ಕೆ ಬಂದರೆ ನಾನೂ ಸಿಎಂ ಆಕಾಂಕ್ಷಿ: ಅನಿಲ್ ವಿಜ್‌

ಪಿಟಿಐ
Published 15 ಸೆಪ್ಟೆಂಬರ್ 2024, 12:54 IST
Last Updated 15 ಸೆಪ್ಟೆಂಬರ್ 2024, 12:54 IST
ಅನಿಲ್‌ ವಿಜ್‌
ಅನಿಲ್‌ ವಿಜ್‌   

ಅಂಬಾಲ/ ಚಂಡೀಗಢ: ‘ಹರಿಯಾಣದಲ್ಲಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಕೂಡ ಆಕಾಂಕ್ಷಿಯಾಗಿದ್ದೇನೆ’ ಎಂದು ಬಿಜೆಪಿಯ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಅನಿಲ್‌ ವಿಜ್‌ ತಿಳಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ನಯಾಬ್‌ ಸಿಂಗ್‌ ಸೈನಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಪಕ್ಷವು ಈಗಾಗಲೇ ಸ್ಪಷ್ಟಪಡಿಸಿದೆ. ಇದರ ಬೆನ್ನಲ್ಲೇ, ಆರು ಅವಧಿಗೆ ಶಾಸಕರಾಗಿರುವ ವಿಜ್‌ ಕೂಡ ಮುಖ್ಯಮಂತ್ರಿಯಾಗುವ ಬಯಕೆ ವ್ಯಕ್ತಪಡಿಸಿದ್ದಾರೆ. 

‘ನನಗೆ ತಿಳಿದಂತೆ, ಪಕ್ಷದಲ್ಲಿ ಇದುವರೆಗೂ ಏನಾಗಿದೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಹರಿಯಾಣದ ವಿವಿಧೆಡೆಯಿಂದ ಜನರು ಬಂದು ನನ್ನನ್ನು ಭೇಟಿಯಾಗುತ್ತಿದ್ದಾರೆ. ಪಕ್ಷದಲ್ಲಿ ನೀವು ಹಿರಿಯರಾಗಿದ್ದು, ಯಾಕೆ ಮುಖ್ಯಮಂತ್ರಿಯಾಗಬಾರದು ಎಂದು ಸ್ವಕ್ಷೇತ್ರ ಅಂಬಾಲದಲ್ಲಿಯೂ ಕೇಳುತ್ತಿದ್ದಾರೆ. ಜನರ ಬೇಡಿಕೆ ಹಾಗೂ ಹಿರಿತನ ಆಧರಿಸಿ, ನಾನು ಕೂಡ ಮುಖ್ಯಮಂತ್ರಿ ಹುದ್ದೆಗೆ ಹಕ್ಕು ಮಂಡಿಸುತ್ತೇನೆ. ಈ ವಿಚಾರದಲ್ಲಿ ಪಕ್ಷದ ಹೈಕಮಾಂಡ್‌ ಅಂತಿಮ ನಿರ್ಧಾರ ಕೈಗೊಳ್ಳಲಿದೆ’ ಎಂದು ತಿಳಿಸಿದರು.

ADVERTISEMENT

‘ನನ್ನನ್ನು ಸಿ.ಎಂ ಆಗಿ ಆಯ್ಕೆ ಮಾಡುತ್ತದೆಯೋ, ಇಲ್ಲವೋ ಎಂಬುದು ಬೇರೆ ವಿಚಾರ. ಒಂದೊಮ್ಮೆ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದರೆ, ಹರಿಯಾಣದ ಚಹರೆಯನ್ನೇ ಬದಲಾಯಿಸುತ್ತೇನೆ’ ಎಂದು ಭರವಸೆ ನೀಡಿದರು.

71 ವರ್ಷದ ಅನಿಲ್‌ ವಿಜ್‌ ಅವರು, ಅಂಬಾಲ ಕಂಟೋನ್ಮೆಂಟ್‌ ಕ್ಷೇತ್ರದಿಂದ ಒಟ್ಟು ಆರು ಬಾರಿ ಶಾಸಕರಾಗಿದ್ದು, ಇದೇ ಕ್ಷೇತ್ರದಿಂದ ಪುನಾರಾಯ್ಕೆ ಬಯಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.