ಚಂಡೀಗಢ: ಮತಗಟ್ಟೆ ಸಮೀಕ್ಷೆಗಳ ಫಲಿತಾಂಶವನ್ನು ತಳ್ಳಿ ಹಾಕಿರುವ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಸತತ ಮೂರನೇ ಬಾರಿಗೆ ಬಿಜೆಪಿ ರಾಜ್ಯದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 8ರಂದು ಚುನಾವಣೆಯ ಫಲಿತಾಂಶ ಪ್ರಕಟವಾಗಲಿದ್ದು, ಕಾಂಗ್ರೆಸ್ ಸೋತು, ಇವಿಎಂ ಮೇಲೆ ಗೂಬೆ ಕೂರಿಸಲಿದೆ ಎಂದು ಹೇಳಿದ್ದಾರೆ.
‘ಅಕ್ಟೋಬರ್ 8ರಂದು ನಾವು ಸರ್ಕಾರ ರಚಿಸಲಿದ್ದೇವೆ. ಅಂದು ಜನ ಉತ್ತರ ನೀಡಲಿದ್ದಾರೆ. ಕಾಂಗ್ರೆಸ್ ಇವಿಎಂ ಅನ್ನು ದೂರಲಿದೆ’ ಎಂದು ಸೈನಿ ನುಡಿದಿದ್ದಾರೆ.
90 ಕ್ಷೇತ್ರಗಳ ಪೈಕಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎನ್ನುವ ಪ್ರಶ್ನೆಗೆ, ‘ಪೂರ್ಣ ಬಹುಮತದೊಂದಿಗೆ ನಾವು ಸರ್ಕಾರ ರಚಿಸಲಿದ್ದೇವೆ’ ಎಂದು ಉತ್ತರಿಸಿದ್ದಾರೆ.
‘ರಾಜ್ಯದಲ್ಲಿ ನಮ್ಮ ಪಕ್ಷ ಮಾಡಿದ ಅಭಿವೃದ್ಧಿ ಕಾರ್ಯಗಳಿಂದಾಗಿ ಜನ ನಮ್ಮನ್ನು ಮತ್ತೆ ಆಯ್ಕೆ ಮಾಡಲಿದ್ದಾರೆ. ಸಮಾಜದ ಯಾವುದೇ ವರ್ಗಕ್ಕೆ ತಾರತಮ್ಯ ಮಾಡದೇ ಬಿಜೆಪಿ ಕೆಲಸ ಮಾಡಿದೆ. ನಾವು ಪೂರ್ಣ ಬಹುಮತದ ಸರ್ಕಾರ ರಚನೆ ಮಾಡುತ್ತೇವೆ’ ಎಂದು ಹೇಳಿದ್ದಾರೆ.
‘ಉತ್ತರಾಖಂಡದಲ್ಲೂ ಕಾಂಗ್ರೆಸ್ ಸರ್ಕಾರ ರಚಿಸಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿದ್ದವು. ಮತಗಟ್ಟೆ ಸಮೀಕ್ಷೆಗಳಿಗೆ ತಮ್ಮದೇ ಆದ ಸಿದ್ಧಾಂತ ಹಾಗೂ ವ್ಯವಸ್ಥೆ ಇದೆ. ಬಿಜೆಪಿ ಮೂರನೇ ಬಾರಿಗೆ ಅಧಿಕಾರಕ್ಕೆ ಬರಬೇಕು ಎಂದು ಹರಿಯಾಣದ ಜನರ ಬಯಕೆ. ನಾವು ಸರ್ಕಾರ ರಚಿಸಲಿದ್ದೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶನಿವಾರ ಹರಿಯಾಣದ 90 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಶೇ 67ರಷ್ಟು ಮತ ಚಲಾವಣೆಗೊಂಡಿದೆ. ಎಲ್ಲಾ ಮತಗಟ್ಟೆ ಸಮೀಕ್ಷೆಗಳು 10 ವರ್ಷಗಳ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲಿದೆ ಎಂದು ಭವಿಷ್ಯ ನುಡಿದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.