ADVERTISEMENT

ಕೈಗಾರಿಕಾ ಕ್ರಾಂತಿ 4.0ಗೆ ಭಾರತ ಸಿದ್ಧ: ಪ್ರಧಾನಿ ನರೇಂದ್ರ ಮೋದಿ ಅಭಿಮತ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 15:35 IST
Last Updated 21 ಅಕ್ಟೋಬರ್ 2024, 15:35 IST
ಪ್ರಧಾನಿ ಮೋದಿ
ಪ್ರಧಾನಿ ಮೋದಿ   

ನವದೆಹಲಿ: ‘ಬ್ರಿಟಿಷರ ಆಳ್ವಿಕೆ ಇದ್ದಿದ್ದರಿಂದಾಗಿ ಕೈಗಾರಿಕಾ ಕ್ರಾಂತಿಯ ಲಾಭವನ್ನು ಪಡೆಯಲು ಭಾರತಕ್ಕೆ ಸಾಧ್ಯವಾಗಲಿಲ್ಲ. ಆದರೆ, ‘ಕೈಗಾರಿಕಾ ಕ್ರಾಂತಿ 4.0’ಕ್ಕೆ ಬೇಕಾಗಿರುವ ಎಲ್ಲ ಕೌಶಲ ಹಾಗೂ ಮೂಲಸೌಕರ್ಯಗಳನ್ನು ಪಡೆದುಕೊಳ್ಳಲು ಭಾರತವು ಕ್ಷಿ‍ಪ್ರವಾಗಿ ಕೆಲಸ ಮಾಡುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಸೊಮವಾರ ನಡೆದ ‘ಎನ್‌ಡಿಟಿವಿ ವರ್ಲ್ಡ್‌ ಸಮಿಟ್‌’ನಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಂಪರ್ಕ, ಆಧುನಿಕ ತಂತ್ರಜ್ಞಾನ, ಆಧುನಿಕ ಉತ್ಪಾದನಾ ತಂತ್ರಜ್ಞಾನವನ್ನು ಮೈಗೂಡಿಸಿಕೊಂಡಿರುವ ಈ ಯುಗದ ಕೈಗಾರಿಕಾ ಅಭಿವೃದ್ಧಿಯನ್ನು ‘ಕೈಗಾರಿಕಾ ‌ಕ್ರಾಂತ್ರಿ 4.0’ ಎಂದು ಕರೆಯಲಾಗುತ್ತದೆ.

ಈ ಬಗ್ಗೆ ಪ್ರಸ್ತಾಪಿಸಿದ ಮಾತನಾಡಿದ ಪ್ರಧಾನಿ ಮೋದಿ, ‘ಕೈಗಾರಿಕಾ ‌ಕ್ರಾಂತ್ರಿ 4.0’ರ ಈ ಯುಗದಲ್ಲಿ ಭಾರತವು ಯಾರಿಗೂ ಗುಲಾಮನಾಗಿಲ್ಲ. ಸ್ವಾತಂತ್ರ್ಯ ಪಡೆದುಕೊಂಡು 75 ವರ್ಷಗಳು ಸಂದಿವೆ. ಆದ್ದರಿಂದ, ಕೈಗಾರಿಕಾ ಕ್ರಾಂತಿಯ ಈ ಯುಗಕ್ಕೆ ನಾವು ಸಿದ್ಧರಾಗಿದ್ದೇವೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಭಾರತದ ಅಭಿವೃದ್ಧಿಯು ಇತರ ದೇಶಗಳಲ್ಲಿ ಅಸೂಯೆಯನ್ನು ಹುಟ್ಟಿಸುತ್ತಿಲ್ಲ. ಭಾರತ ಅಭಿವೃದ್ಧಿ ಹೊಂದುತ್ತಿರುವುದರಿಂದಾಗಿ ನಮಗೆ ಯಾವ ಶತ್ರುಗಳೂ ಹುಟ್ಟಿಕೊಳ್ಳುತ್ತಿಲ್ಲ. ನಮ್ಮ ಅಭಿವೃದ್ಧಿಗೆ ಜಗತ್ತು ಸಂತಸ ಪಡುತ್ತಿದೆ ಮತ್ತು ನಮ್ಮ ಅಭಿವೃದ್ಧಿಯು ಜಗತ್ತಿಗೆ ಸಹಕಾರಿಯಾಗುತ್ತಿದೆ’ ಎಂದು ವಿಶ್ಲೇಷಿಸಿದರು.

‘ನಂಬಿಕೆ ವಿಶ್ವಾಸಾರ್ಹತೆ: ದೇಶಗಳ ನಡುವಿನ ಸಂಬಂಧಗಳ ಅಡಿಪಾಯ’ 

‘ಹಗುರವಾಗಿ ಪರಿಗಣಿಸುವಂಥ ಸಂಬಂಧದಲ್ಲಿ ಭಾರತಕ್ಕೆ ನಂಬಿಕೆ ಇಲ್ಲ. ವಿಶ್ವಾಸಾರ್ಹತೆ ಮತ್ತು ನಂಬಿಕೆಯು ಎರಡು ದೇಶಗಳ ಸಂಬಂಧಕ್ಕೆ ಅಡಿಪಾಯವಾಗುತ್ತವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಭಿಪ್ರಾಯಪಟ್ಟರು. ಭಾರತ–ಕೆನಡಾ ದೇಶಗಳ ಮಧ್ಯೆ ಸಂಘರ್ಷ ನಡೆಯುತ್ತಿರುವ ಈ ಹೊತ್ತಿನಲ್ಲಿಯೇ ಪ್ರಧಾನಿ ಮೋದಿ ಅವರು ಈ ಹೇಳಿಕೆ ನೀಡಿದ್ದಾರೆ. ಕೆನಡಾ ಜೊತೆಗಿನ ಸಂಘರ್ಷದ ಕುರಿತು ಮೋದಿ ಅವರು ತಮ್ಮ ಭಾಷಣದಲ್ಲಿ ಎಲ್ಲಿಯೂ ಪ್ರಸ್ತಾಪ ಮಾಡಲಿಲ್ಲ. ‘ನಂಬಿಕೆ ಹಾಗೂ ವಿಶ್ವಾಸಾರ್ಹತೆಯ ಅಡಿಪಾಲದ ಮೇಲೆಯೇ ಭಾರತ ಹಾಗೂ ಇತರ ದೇಶಗಳ ಸಂಬಂಧ ನಿಂತಿದೆ. ಇದನ್ನು ಇಡೀ ಜಗತ್ತೇ ಅರಿತುಕೊಳ್ಳುತ್ತಿದೆ. ಜೊತೆಗೆ ಹಲವು ಕ್ಷೇತ್ರದಲ್ಲಿ ಭಾರತವು ‘ಜಗತ್ತಿನ ಭವಿಷ್ಯ’ದ ದಿಕ್ಕನ್ನು ನಿರ್ದೇಶಿಸುತ್ತಿದೆ. ಬಿಕ್ಕಟ್ಟುಗಳ ಸಂದರ್ಭದಲ್ಲಿ ಭಾರತವು ಉತ್ತಮ ಸ್ನೇಹಿತನಾಗಬಲ್ಲದು ಎಂದು ಜಗತ್ತು ಅರಿತುಕೊಳ್ಳುತ್ತಿದೆ’ ಎಂದರು.

‘ಭಾರತದ ಬಳಿ ಇದೆ ‘ಡಬಲ್‌ ಎಐ’

‘ಭಾರತದ ಬಳಿ ‘ಡಬಲ್‌ ಎಐ’ಗಳ ಶಕ್ತಿ ಮತ್ತು ಅನುಕೂಲಗಳಿವೆ. ಒಂದು ‘ಆ್ಯಸ್ಪಿರೇಷನಲ್‌ ಇಂಡಿಯಾ’ (ಮಹತ್ವಾಕಾಂಶೆಯ ಭಾರತ) ಮತ್ತೊಂದು ‘ಕೃತಕ ಬುದ್ಧಿಮತ್ತೆ’. ಈ ಎರಡು ಶಕ್ತಿಗಳು ಮೇಳೈಸಿದರೆ ಸಹಜವಾಗಿ ಅಭಿವೃದ್ಧಿಯು ವೇಗ ಪಡೆಯುತ್ತದೆ’ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು. ‘ತಂತ್ರಜ್ಞಾನ ಡಿಜಿಟಲ್‌ ಕ್ಷೇತ್ರದ ಹೊಸ ಅನ್ವೇಷಣೆಗಳು ಮತ್ತು ಪ್ರಜಾಪ್ರಭುತ್ವ ತತ್ವಗಳು ಒಟ್ಟೊಟ್ಟಿಗೆ ಸಾಗಬಹುದು ಎಂಬುದನ್ನು ಭಾರತವು ಜಗತ್ತಿಗೆ ತೋರಿಸಿದೆ. ತಂತ್ರಜ್ಞಾನ ಎಂಬುದು ಜನರನ್ನು ವಿಭಜಿಸುವ ಅಥವಾ ನಿಯಂತ್ರಿ‌ಸುವುದಕ್ಕೆ ಇರುವ ಸಾಧನವಲ್ಲ. ಬದಲಿಗೆ ಎಲ್ಲರನ್ನೂ ಒಳಗೊಳ್ಳುವ ಪಾರದರ್ಶಕವಾದ ಹಾಗೂ ಸಬಲೀಕರಣಕ್ಕೆ ಸಾಕಾ‌ರಕ್ಕೆ ಸಾಧನವಾಗಬಹುದು ಎಂಬುದನ್ನೂ ದೇಶ ತೋರಿಸಿದೆ’ ಎಂದು ಶ್ಲಾಘಿಸಿದರು. ‘ಸ್ಥಿರತೆಗಾಗಿ ಮತ; ಜನರ ಸಂದೇಶ’: ‘ಆರು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಸರ್ಕಾರವೊಂದಕ್ಕೆ ಸತತವಾಗಿ ಮೂರನೇ ಬಾರಿಗೆ ಜನರು ಅವಕಾಶ ನೀಡಿದ್ದಾರೆ. ನಮಗೆ ಸ್ಥಿರತೆ ಬೇಕು ಎನ್ನುವ ಕುರಿತ ಜನರ ಸಂದೇಶವಿದು. ಹರಿಯಾಣ ಚುನಾವಣೆಯಲ್ಲಿಯೂ ಜನರು ಇದೇ ಸಂದೇಶವನ್ನು ರವಾನಿಸಿದರು’ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.