ಚಂಡೀಗಢ: ಹರಿಯಾಣದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಜೆಜೆಪಿ ಮೈತ್ರಿ ಕೂಟಕ್ಕೆ ಹಿನ್ನಡೆಯಾಗಿದೆ. ಮೂರು ಮೇಯರ್ ಸ್ಥಾನಗಳ ಪೈಕಿ ಮೈತ್ರಿ ಕೂಟ ಒಂದು ಸ್ಥಾನವನ್ನಷ್ಟೇ ಗೆಲ್ಲಲು ಸಾಧ್ಯವಾಗಿದೆ.
ಅಂಬಾಲಾ, ಪಂಚಕುಲ ಮತ್ತು ಸೋನಿಪತ್ ನಗರಗಳ ಮೇಯರ್ ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆದಿತ್ತು. ಅದರ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ.
ಪಂಚಕುಲದಲ್ಲಿ ಬಿಜೆಪಿ ತ್ರಾಸದಾಯಕ ಗೆಲುವು ದಾಖಲಿಸಿದೆ. ಕಾಂಗ್ರೆಸ್ ಮತ್ತು 'ಹರಿಯಾಣ ಜನ್ ಚೇತನಾ ಪಕ್ಷ (ಎಚ್‌ಜೆಸಿಪಿ)' ಕ್ರಮವಾಗಿ ಸೋನಿಪತ್ ಮತ್ತು ಅಂಬಾಲಾದಲ್ಲಿ ಮೇಯರ್ ಸ್ಥಾನಗಳನ್ನು ದಕ್ಕಿಸಿಕೊಂಡಿವೆ. ಮೂರು ನಗರಗಳಲ್ಲಿ ಮೇಯರ್ ಸ್ಥಾನಗಳಿಗೆ ಇದೇ ಮೊದಲ ಬಾರಿಗೆ ಚುನಾವಣೆ ನಡೆದಿದೆ.
ಎರಡು ವರ್ಷಗಳ ಹಿಂದೆ ಹರಿಯಾಣದಲ್ಲಿ ಬಿಜೆಪಿ ನೇತೃತ್ವದ ಮೈತ್ರಿ ಕೂಟವು ಐದು ನಗರ ಸ್ಥಳೀಯ ಸಂಸ್ಥೆಗಳ ಮೇಯರ್ ಸ್ಥಾನವನ್ನು ತನ್ನದಾಗಿಸಿಕೊಂಡಿತ್ತು. 2018 ರಲ್ಲಿ ನಡೆದಿದ್ದ ಆ ಚುನಾವಣೆಯಲ್ಲಿ ಮೈತ್ರಿ ಕೂಟ ಹಿಸಾರ್, ಕರ್ನಾಲ್, ಪಾಣಿಪತ್, ರೋಹ್ಟಕ್ ಮತ್ತು ಯಮುನಾನಗರಗಳಲ್ಲಿ ಗೆದ್ದಿತ್ತು.
ಆದರೆ, ಈ ವರ್ಷದ ನವೆಂಬರ್‌ನಲ್ಲಿ ಸೋನಿಪತ್ ವಿಧಾನಸಭೆ ಕ್ಷೇತ್ರಕ್ಕೆ ನಡೆದಿದ್ದ ಉಪಚುನಾವಣೆಯನ್ನು ಗೆಲ್ಲುವಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ವಿಫಲವಾಗಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿತ್ತು.
ಅಂಬಾಲಾ: ಮೇಯರ್ ಸ್ಥಾನಕ್ಕೆ ಎಚ್‌ಜೆಸಿಪಿಯ, ಕೇಂದ್ರದ ಮಾಜಿ ಸಚಿವ ವಿನೋದ್ ಶರ್ಮಾ ಅವರ ಪತ್ನಿ ಶಕ್ತಿ ರಾಣಿ ಶರ್ಮಾ ಅವರು ಅಚ್ಚರಿಯ ರೀತಿಯಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ವಂದನಾ ಶರ್ಮಾ ಅವರನ್ನು ಶಕ್ತಿ ರಾಣಿ 8,084 ಮತಗಳ ಅಂತರದಿಂದ ಸೋಲಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. 2014ರ ಹರಿಯಾಣ ವಿಧಾನಸಭಾ ಚುನಾವಣೆ ಸೋಲಿನ ನಂತರ ಎಚ್‌ಜೆಸಿಪಿಯ ವಿನೋದ್ ಶರ್ಮಾ ಅವರಿಗೆ ಇದು ಮೊದಲ ಗೆಲುವಿನ ಸವಿಯಾಗಿದ್ದು, ಪಕ್ಷಕ್ಕೆ ಹೊಸ ಚೈತನ್ಯ ತುಂಬಿದೆ.
ಪಂಚಕುಲ: ಬಿಜೆಪಿ ಕುಲಭೂಷಣ ಗೊಯೆಲ್ ಪಂಚಕುಲದ ಮೇಯರ್ ಆಗಲಿದ್ದಾರೆ. ಅವರು ತಮ್ಮ ಸಮೀಪ ಸ್ಪರ್ಧಿ ಕಾಂಗ್ರೆಸ್‌ನ ಉಪೀಂದರ್ ಕೌರ್ ಅಹ್ಲುವಾಲಿಯಾ ಅವರನ್ನು 2057 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ.
ಸೋನಿಪತ್: ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತು. ಪಕ್ಷದ ನಿಖಿಲ್ ಮದನ್ 13,818 ಮತಗಳಿಂದ ಬಿಜೆಪಿಯ ಲಲಿತ್ ಬಾತ್ರಾ ಅವರನ್ನು ಸೋಲಿಸಿದರು.
ಈ ಮೂರು ನಗರಗಳಲ್ಲಿನ ಎಲ್ಲಾ ವಾರ್ಡ್‌ಗಳ ಕೌನ್ಸಿಲರ್‌ಗಳ ಆಯ್ಕೆಗೂ ಚುನಾವಣೆ ನಡೆದಿತ್ತು. ಅಂಬಾಲಾ ನಗರಸಭೆಯ 20 ಸ್ಥಾನಗಳ ಪೈಕಿ ಬಿಜೆಪಿ 8, ಎಚ್‌ಜೆಸಿಪಿ 7, ಕಾಂಗ್ರೆಸ್ 3 ಮತ್ತು ಹರಿಯಾಣ ಡೆಮಾಕ್ರಟಿಕ್ ಫ್ರಂಟ್ 2 ಸ್ಥಾನಗಳನ್ನು ಗೆದ್ದಿದೆ. ಸೋನಿಪತ್‌ನಲ್ಲಿ ಬಿಜೆಪಿ 10 ವಾರ್ಡ್‌ಗಳಲ್ಲಿ, ಕಾಂಗ್ರೆಸ್ 9ರಲ್ಲಿ ಜಯಗಳಿಸಿವೆ. ಪಂಚಕುಲದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕ್ರಮವಾಗಿ 9 ಮತ್ತು 7 ಸ್ಥಾನಗಳನ್ನು ಗೆದ್ದವು. ಜೆಜೆಪಿ ಎರಡು ಸ್ಥಾನಗಳಲ್ಲಿ ಜಯಗಳಿಸಿತು.
ರೇವರಿ ಪುರಸಭೆ ಅಧ್ಯಕ್ಷರು ಮತ್ತು ಸದಸ್ಯರ ಆಯ್ಕೆಗೂ ಮತದಾನ ನಡೆದಿತ್ತು. ಇಲ್ಲಿ ಬಿಜೆಪಿಯು ಅಧ್ಯಕ್ಷ ಸ್ಥಾನ ಗೆದ್ದಿದೆ. ಸಂಪ್ಲಾ (ರೋಹ್ಟಕ್), ಧರುಹೆರಾ (ರೇವಾರಿ) ಮತ್ತು ಉಕಲಾನಾ (ಹಿಸಾರ್) ಪುರಸಭೆಯ ಸಮಿತಿಗಳಿಗೂ ಚುನಾವಣೆಗಳು ನಡೆದಿದ್ದವು. ಈ ಮೂರರಲ್ಲೂ ಬಿಜೆಪಿ ಸೋತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.