ಚಂಡೀಗಢ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಜಯ ಸಾಧಿಸಿರುವ ದೇವೇಂದ್ರ ಕಾದಿಯಾನ್ ಮತ್ತು ರಾಜೇಶ್ ಜೂನ್ ಅವರು ಬಿಜೆಪಿಗೆ ಬೆಂಬಲ ನೀಡಲು ತೀರ್ಮಾನಿಸಿದ್ದಾರೆ.
ಹರಿಯಾಣ ವಿಧಾನಸಭೆಯಲ್ಲಿ ಬಹುಮತ ಪಡೆದಿರುವ ಬಿಜೆಪಿ ಅಲ್ಲಿ ಸತತ ಮೂರನೆಯ ಬಾರಿಗೆ ಸರ್ಕಾರ ರಚಿಸಲಿದೆ.
ರಾಜೇಶ್ ಜೂನ್ ಅವರು ಕಾಂಗ್ರೆಸ್ ಟಿಕೆಟ್ ಸಿಗದ ಕಾರಣಕ್ಕೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಕಾದಿಯಾನ್ ಅವರು ಬಿಜೆಪಿಯಿಂದ ಟಿಕೆಟ್ ಸಿಗದ ಕಾರಣಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಬಿಜೆಪಿ ಸರ್ಕಾರ ರಚನೆಯಾದ ನಂತರ, ಸರ್ಕಾರಕ್ಕೆ ಬೆಂಬಲ ನೀಡಲು ಕಾದಿಯಾನ್ ಮತ್ತು ರಾಜೇಶ್ ಅವರು ತೀರ್ಮಾನಿಸಿದ್ದಾರೆ ಎಂದು ಹರಿಯಾಣ ಬಿಜೆಪಿ ಘಟಕದ ಅಧ್ಯಕ್ಷ ಮೋಹನ್ ಲಾಲ್ ಬಡೋಲಿ ಅವರು ಬುಧವಾರ ತಿಳಿಸಿದ್ದಾರೆ.
ಕಾದಿಯಾನ್ ಮತ್ತು ರಾಜೇಶ್ ಅವರು ಹರಿಯಾಣದ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಹಾಗೂ ಸಹ ಉಸ್ತುವಾರಿ ಬಿಪ್ಲಬ್ ಕುಮಾರ್ ದೇವ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಬಡೋಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.