ಚಂಡೀಗಢ: ತಲೆಮರೆಸಿಕೊಂಡಿರುವ ಖಾಲಿಸ್ಥಾನ ಪ್ರತ್ಯೇಕತಾವಾದಿ ಹೋರಾಟಗಾರ ಅಮೃತ್‌ಪಾಲ್ ಸಿಂಗ್ ಮತ್ತು ಆತನ ಸಹಚರ ಪಲ್ಪಾಲ್ ಪ್ರೀತ್ ಸಿಂಗ್‌ಗೆ ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ತನ್ನ ಮನೆಯಲ್ಲಿ ಆಶ್ರಯ ನೀಡಿದ್ದ ಆರೋಪದ ಮೇಲೆ ಬಲ್ಜೀತ್ ಕೌರ್ ಎಂಬ ಮಹಿಳೆಯನ್ನು ಬಂಧಿಸಲಾಗಿದೆ ಎಂದು ‘ಇಂಡಿಯಾ ಟುಡೆ’ ವರದಿ ಮಾಡಿದೆ.
ಕಳೆದ ವಾರ ಸುಮಾರು 50 ಕಾರುಗಳಲ್ಲಿ ಪಂಜಾಬ್ ಪೊಲೀಸರು ಅಮೃತ್‌ಪಾಲ್‌ನನ್ನು ಹಿಂಬಾಲಿಸಿದ್ದರು. ಆದರೆ, ಕೂದಲೆಳೆ ಅಂತರದಲ್ಲಿ ಆತ ತಪ್ಪಿಸಿಕೊಡಿದ್ದ. ಈ ಬಗ್ಗೆ ಪಂಜಾಬ್ ಹೈಕೋರ್ಟ್ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಅಮೃತ್ ಪಾಲ್ ಸಿಂಗ್‌ಗಾಗಿ ಹುಡುಕಾಟ ಈಗ 6ನೇ ದಿನಕ್ಕೆ ಕಾಲಿಟ್ಟಿದೆ.
‘ಅಮೃತ್ ಪಾಲ್ ಮತ್ತು ಆತನ ಸಹಚರರಿಗೆ ಆಶ್ರಯ ನೀಡಿದ್ದ ಬಲ್ಜೀತ್ ಕೌರ್ ಎಂಬ ಮಹಿಳೆಯನ್ನು ಶಹಾಬಾದ್‌ನಲ್ಲಿ ಬಂಧಿಸಿದ್ದು, ಪಂಜಾಬ್ ಪೊಲೀಸರಿಗೆ ಒಪ್ಪಿಸಲಾಗಿದೆ’ಎಂದು ಕುರುಕ್ಷೇತ್ರ ಎಸ್‌ಪಿ ಸುರಿಂದರ್ ಸಿಂಗ್ ಭೊರಿಯಾ ಹೇಳಿದ್ದಾರೆ.
ಅಮೃತ್‌ಪಾಲ್ ಪಂಜಾಬ್ ತೊರೆದು ಬೇರೆಡೆ ತೆರಳಿರುವ ಸಾಧ್ಯತೆ ಇದೆ ಎಂದು ಆಕೆ ತಿಳಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಅಮೃತ್‌ಪಾಲ್ ಸಿಂಗ್‌ನ ಖಾಸಗಿ ಭದ್ರತಾ ಸಿಬ್ಬಂದಿಯಲೊಬ್ಬನಾದ ತೇಜಿಂದರ್ ಸಿಂಗ್ ಗಿಲ್‌ನನ್ನು ಇಂದು ಬೆಳಗಿನ ಜಾವ ಪೊಲೀಸರು ಬಂಧಿಸಿದ್ದರು.
ತೇಜಿಂದರ್ ಸಿಂಗ್, ಲುಧಿಯಾನಾದ ಮಂಗೇವಾಲ್ ಹಳ್ಳಿಯ ನಿವಾಸಿಯಾಗಿದ್ದು, ಅಮೃತ್ ಪಾಲ್ ಭದ್ರತೆಗೆ ನಿಯೋಜನೆಗೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಪರವಾನಗಿ ಪಡೆಯದಿದ್ದರೂ ಸಹ ತೇಜಿಂದರ್ ಗನ್ ಹಿಡಿದ ಚಿತ್ರ, ವಿಡಿಯೊಗಳನ್ನು ಸೋಶಿಯಲ್ ಮಿಡಿಯಾಗೆ ಪೋಸ್ಟ್ ಮಾಡುತ್ತಿದ್ದ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.