ADVERTISEMENT

ಹರಿಯಾಣದ ಕುಖ್ಯಾತ ಕ್ರಿಮಿನಲ್‌ ಜಬ್ರುದ್ದೀನ್‌ ಉತ್ತರ ಪ್ರದೇಶದಲ್ಲಿ ಬಂಧನ

ಪಿಟಿಐ
Published 28 ಮಾರ್ಚ್ 2023, 9:22 IST
Last Updated 28 ಮಾರ್ಚ್ 2023, 9:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಜಾಫರ್‌ನಗರ: ಹರಿಯಾಣ ವಿಶೇಷ ಕಾರ್ಯಪಡೆ (ಎಸ್‌ಟಿಎಫ್‌) ಬಂಧನದಿಂದ ತಪ್ಪಿಸಿಕೊಂಡಿದ್ದ ಕುಖ್ಯಾತ ಕ್ರಿಮಿನಲ್‌ ಜಬ್ರುದ್ದೀನ್‌ನನ್ನು ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಗ್ರಾಮದಲ್ಲಿ ಸೋಮವಾರ ಬಂಧಿಸಲಾಗಿದೆ. ಬಂಧನದ ಸಂದರ್ಭ ಗುಂಡಿನ ಚಕಮಕಿ ನಡೆದಿದೆ.

ಜಬ್ರುದ್ದೀನ್‌ ಕುರಿತಂತೆ ಮಾಹಿತಿ ನೀಡುವವರಿಗೆ ₹25,000 ನಗದು ಬಹುಮಾನವನ್ನು ಘೋಷಿಸಲಾಗಿತ್ತು. ಜಿಲ್ಲೆಯ ಜಿಂಜಾನಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಆರೋಪಿಯೂ ಪತ್ತೆಯಾಗಿದ್ದು, ಪೊಲೀಸರು ಆರೋಪಿಯನ್ನು ಸುತ್ತುವರಿದು ಗುಂಡು ಹಾರಿಸಿದ ಪರಿಣಾಮ ಆರೋಪಿಗೆ ಗುಂಡು ತಗುಲಿದೆ ಎಂದು ಶಾಮ್ಲಿಯ ಪೊಲೀಸ್‌ ವರಿಷ್ಠಧಿಕಾರಿ ವರದಿಗಾರರಿಗೆ ತಿಳಿಸಿದ್ದಾರೆ.

ಆರೋಪಿಯನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಬಳಿ ಇದ್ದ ಅಕ್ರಮ ಬಂದೂಕು ಹಾಗೂ ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಜಿಂಜನಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬರುವ ಶಾಮ್ಲಿಯ ಕೆರ್ತು ಗ್ರಾಮದ ನಿವಾಸಿಗಳು ಹರಿಯಾಣ ಪೊಲೀಸ್‌ ವಿಶೇಷ ಕಾರ್ಯಪಡೆ (ಎಸ್‌ಟಿಎಫ್‌) ಸಿಬ್ಬಂದಿ ಮೇಲೆ ಭಾನುವಾರ ದಾಳಿ ಮಾಡಿ ಅವರ ಸೇವಾ ಪಿಸ್ತೂಲ್‌ಗಳನ್ನು ಲೂಟಿ ಮಾಡಿದ್ದಾರೆ. ದಾಳಿಯಲ್ಲಿ ಕಾರ್ಯಪಡೆಯ ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಬ್ರುದ್ದೀನ್‌ನನ್ನು ಹಿಡಿಯಲು ಹರಿಯಾಣ ಎಸ್‌ಟಿಎಫ್ ತಂಡ ಗ್ರಾಮಕ್ಕೆ ತೆರಳಿದ್ದು, ಗ್ರಾಮಸ್ಥರು ಆರೋಪಿಯನ್ನು ಸಿಬ್ಬಂದಿಯ ವಶದಿಂದ ಮುಕ್ತಗೊಳಿಸಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ 40 ಜನರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಶಾಮ್ಲಿಯ ಪೊಲೀಸ್‌ ವರಿಷ್ಠಾಧಿಕಾರಿ ಅಭಿಷೇಕ್‌ ಭಾನುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿದ್ದು, ಲೂಟಿ ಮಾಡಿದ ಪಿಸ್ತೂಲ್‌ಗಳು ಮತ್ತು 10 ಕಾಟ್ರಿಡ್ಜ್‌ಗಳನ್ನು ಅವರ ಬಳಿಯಿಂದ ವಶಪಡಿಸಿಕೊಳ್ಳಲಾಗಿದೆ. ಗಾಯಗೊಂಡ ಪೊಲೀಸರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.