ಬೆಂಗಳೂರು: ಇನ್ಫೋಸಿಸ್ ಸಹ ಸಂಸ್ಥಾಪಕ ಹಾಗೂ ತಂತ್ರಜ್ಞಾನ ಪರಿಣತ ನಂದನ್ ನಿಲೇಕಣಿ ಅವರು ತಾವು ಎಂಜಿನಿಯರಿಂಗ್ ಪದವಿ ಪಡೆದ ‘ಐಐಟಿ ಬಾಂಬೆ‘ಗೆ ₹ 315 ಕೋಟಿ ಉದಾರ ದೇಣಿಗೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಸಂಸ್ಥೆ ನನಗೆ ಹೆಚ್ಚಿನದನ್ನು ನೀಡಿದೆ. ಇದರ ಗೌರವಾರ್ಥದ ನೆರವು ಇದಾಗಿದೆ. ನಾಳೆ ನಮ್ಮ ಜಗತ್ತನ್ನು ರೂಪಿಸುವ ವಿದ್ಯಾರ್ಥಿಗಳೆಡೆಗಿನ ಬದ್ಧತೆಯಾಗಿದೆ ಎಂದು ನಂದನ್ ನಿಲೇಕಣಿ ಟ್ವೀಟ್ ಮಾಡಿದ್ದಾರೆ.
ವಿಶ್ವ ದರ್ಜೆಯ ಮೂಲಸೌಕರ್ಯ, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆ ಉತ್ತೇಜಿಸಲು ಹಾಗೂ ಈ ಕ್ಯಾಂಪಸ್ ಅಲ್ಲಿ ಟೆಕ್ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆ ಪೋಷಿಸಲು ಈ ದೇಣಿಗೆ ನೀಡಿರುವುದಾಗಿ ನಂದನ್ ನಿಲೇಕಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಭಾರತದಲ್ಲಿ ಹಳೆಯ ವಿದ್ಯಾರ್ಥಿಯೊಬ್ಬರು ನೀಡಿದ ಅತಿದೊಡ್ಡ ದೇಣಿಗೆ ಇದಾಗಿದೆ ಎಂದು ಐಐಟಿ ಬಾಂಬೆ ಹೇಳಿದೆ.
ಈ ಹಿಂದೆ ನಂದನ್ ನಿಲೇಕಣಿ ಅವರು ಐಐಟಿ ಬಾಂಬೆಗೆ ₹ 85 ಕೋಟಿ ದೇಣಿ ನೀಡಿದ್ದರು. ಅವರು ಐಐಟಿ ಬಾಂಬೆಗೆ ಒಟ್ಟು ₹400 ಕೋಟಿ ದೇಣಿ ನೀಡಿದಂತಾಗಿದೆ.
1973ರಲ್ಲಿ ಐಐಟಿ ಬಾಂಬೆಗೆ ಸೇರಿದ್ದ ನಿಲೇಕಣಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದರು. ಐಐಟಿ ಬಾಂಬೆ 1958ರಲ್ಲಿ ಸ್ಥಾಪನೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.