ನವದೆಹಲಿ: ಉತ್ತರಪ್ರದೇಶದಲ್ಲಿ 2022ರಲ್ಲಿ ನಡೆದ ವಿಧಾನಸಭಾ ಚುನಾವಣೆ ವೇಳೆ ದ್ವೇಷ ಭಾಷಣ ಮಾಡಿರುವ ಆರೋಪದಲ್ಲಿ ಗ್ಯಾಂಗ್‌ಸ್ಟರ್ ಮತ್ತು ರಾಜಕಾರಣಿ ಮುಖ್ತಾರ್ ಅನ್ಸಾರಿ ಪುತ್ರ ಉಮರ್ ಅನ್ಸಾರಿ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ದ್ವೇಷ ಭಾಷಣ ಪ್ರಕರಣದಲ್ಲಿ ಉಮರ್ ಅನ್ಸಾರಿ ಮತ್ತು ಸಹೋದರ ಅಬ್ಬಾಸ್ ಅನ್ಸಾರಿ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ.
ತಮ್ಮ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಉಮರ್ ಅವರು ಸಹೋದರ ಅಬ್ಬಾಸ್ ಜೊತೆ ವೇದಿಕೆ ಹಂಚಿಕೊಂಡಿದ್ದರು. ಆಗ ಮಾತನಾಡಿದ್ದ ಅಬ್ಬಾಸ್ ಸರ್ಕಾರಿ ನೌಕರರಿಗೆ ಬೆದರಿಕೆಯೊಡ್ಡಿದ್ದರು ಎಂದು ಆರೋಪಿಸಲಾಗಿತ್ತು.
‘ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಹೀಗಿರುವಾಗ ಎಫ್‌ಐಆರ್ ಅನ್ನು ನಾವು ರದ್ದುಗೊಳಿಸುವುದಿಲ್ಲ. ನೀವು ವಿಚಾರಣೆ ಎದುರಿಸಿ’ ಎಂದು ನ್ಯಾಯಮೂರ್ತಿಗಳಾದ ಋಷಿಕೇಶ್ ರಾಯ್ ಮತ್ತು ಪಂಕಜ್ ಮಿತ್ತಲ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.
ಅಬ್ಬಾಸ್ ಅನ್ಸಾರಿ ಅವರು ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದಿಂದ (ಎಸ್‌ಬಿಎಸ್‌ಪಿ) ಸ್ಪರ್ಧಿಸಿ, ಶಾಸಕರಾಗಿ ಆಯ್ಕೆಯಾಗಿದ್ದಾರೆ.
‘ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಆರು ತಿಂಗಳು ಯಾವ ಅಧಿಕಾರಿಯನ್ನೂ ವರ್ಗಾಯಿಸಬಾರದು. ಇಲ್ಲಿ ಇದ್ದವರು ಇಲ್ಲಿಯೇ ಉಳಿಯಬೇಕು. ಮೊದಲು ನಮ್ಮ ಲೆಕ್ಕ ಚುಕ್ತಾ ಮಾಡಬೇಕು’ ಎಂದು ಚುನಾವಣಾ ಪ್ರಚಾರ ಸಭೆಯಲ್ಲಿ ಅಬ್ಬಾಸ್ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.