ADVERTISEMENT

ಹಾಥರಸ್ ಕಾಲ್ತುಳಿತ ಪ್ರಕರಣ: ಸಿಗದವರಿಗಾಗಿ ಕುಟುಂಬಸ್ಥರ ಹುಡುಕಾಟ, ರೋದನೆ

ಪಿಟಿಐ
Published 3 ಜುಲೈ 2024, 16:13 IST
Last Updated 3 ಜುಲೈ 2024, 16:13 IST
   

ಹಾಥರಸ್(ಉತ್ತರ ಪ್ರದೇಶ): ಜಿಲ್ಲೆಯ ಫೂಲರಾಯ್‌ ಗ್ರಾಮದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡವರ ರೋದನೆ ಒಂದೆಡೆಯಾದರೆ, ತಮ್ಮವರ ಮೃತದೇಹಗಳನ್ನು ಹುಡುಕುವಲ್ಲಿ ಹಲವರು ಪಡುತ್ತಿರುವ ಯಾತನೆ ಭೀಕರವಾಗಿದೆ.

‘ಇಂತಹ ದುರ್ಘಟನೆಗಳಲ್ಲಿ ತೊಂದರೆ ಅನುಭವಿಸುವುದು ಬಡವರೇ ಹೊರತು ಶ್ರೀಮಂತರಲ್ಲ’ ಎಂದು ಹೇಳುವ ಉನ್ನಾವೊ ಜಿಲ್ಲೆಯ ರಾಜಕುಮಾರಿ ದೇವಿ ಅವರ ಮಾತು, ಕಾಲ್ತುಳಿತದಲ್ಲಿ ಜೀವ ಕಳೆದುಕೊಂಡವರ, ಗಾಯಗೊಂಡಿರುವವರ ಕುಟುಂಬಗಳ ಕಥೆ–ವ್ಯಥೆಯನ್ನು ಹೇಳುವಂತಿದೆ.

ರಾಜಕುಮಾರಿ ದೇವಿ ಅವರು ಆಂಬುಲೆನ್ಸ್‌ನಲ್ಲಿರುವ ತನ್ನ ನಾದಿನಿಯ ಶವದ ಬಳಿ ರೋದಿಸುತ್ತಾ ಈ ಮಾತು ಹೇಳುತ್ತಿದ್ದರೂ, ಅವರ ಕಣ್ಣುಗಳು ಮಾತ್ರ ನಾಪತ್ತೆಯಾಗಿರುವ ನಾದಿನಿಯ ಐದು ವರ್ಷದ ಮಗನನ್ನು ಹುಡುಕುತ್ತಿದ್ದ ದೃಶ್ಯ ಮನ ಕಲುಕುವಂತಿತ್ತು.

ADVERTISEMENT

ಸರ್ಕಾರದ ಬಳಿ ನಿಮ್ಮ ಬೇಡಿಕೆಗಳೇನಾದರೂ ಇವೆಯೇ? ಎಂಬ ಪತ್ರಕರ್ತರ ಪ್ರಶ್ನೆಗೆ,‘ಈಗ ನಾವು ಏನು ಹೇಳುವುದು. ಕೇಳಲು ಏನೂ ಉಳಿದಿಲ್ಲ. ಬಡವರೇ ತೊಂದರೆಗೆ ಸಿಲುಕುವುದು, ಶ್ರೀಮಂತರಲ್ಲ’ ಎಂದು ರಾಜಕುಮಾರಿ ದೇವಿ ಪ್ರತಿಕ್ರಿಯಿಸಿದರು.

ಇಲ್ಲಿನ ಆಸ್ಪತ್ರೆಗಳಲ್ಲಿ ರೋದಿಸುತ್ತಿರುವ ಹಲವರ ಸ್ಥಿತಿ ಒಂದೊಂದು ರೀತಿ. ಸತ್ತವರಿಗಾಗಿ ಗೋಳಾಟ ಒಂದೆಡೆಯಾದರೆ, ನಾಪತ್ತೆಯಾಗಿರುವವರಿಗಾಗಿ ಹುಡುಕಾಟ ನಡೆಸುವ ಯಾತನಾಮಯ ದುಃಸ್ಥಿತಿ ಇನ್ನೊಂದೆಡೆ.

‘ಶವಪರೀಕ್ಷೆ: ನಾಲ್ಕುಪಟ್ಟು ಹೆಚ್ಚಳ’

ಎಟಾ(ಉತ್ತರ ಪ್ರದೇಶ): ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯರು, ಸಾಮಾನ್ಯ ದಿನಗಳಲ್ಲಿ ನಡೆಸುವುದಕ್ಕಿಂತಲೂ ನಾಲ್ಕು ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿನ ವೈದ್ಯರು ಶವಪರೀಕ್ಷೆಗಳನ್ನು ನಡೆಸಿದ್ದಾರೆ. ಇದು, ಕಾಲ್ತುಳಿತದಿಂದಾಗಿ ಸಂಭವಿಸಿದ ಪ್ರಾಣ ಹಾನಿ ಪ್ರಮಾಣವನ್ನು ತೋರಿಸುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಒತ್ತಡ ಹೆಚ್ಚಾಗಿ ಉಸಿರುಗಟ್ಟಿದ ಪರಿಣಾಮ ಬಹಳಷ್ಟು ಜನರು ಮೃತಪಟ್ಟಿರುವುದು ಶವಪರೀಕ್ಷೆಯಿಂದ ಗೊತ್ತಾಗಿದೆ ಎಂದು ಇಲ್ಲಿನ ಆಸ್ಪತ್ರೆಯ ಹೆಚ್ಚುವರಿ ಮುಖ್ಯ ವೈದ್ಯಾಧಿಕಾರಿ ಡಾ.ರಾಮ ಮೋಹನ್‌ ತಿವಾರಿ ಹೇಳಿದ್ದಾರೆ. ‘ಮಂಗಳವಾರ ಫೂಲರಾಯ್‌ ಗ್ರಾಮದಿಂದ 27 ಮೃತದೇಹಗಳನ್ನು ಆಸ್ಪತ್ರೆಗೆ ತರಲಾಗಿತ್ತು. ಮಧ್ಯರಾತ್ರಿ ಹೊತ್ತಿಗೆ 19 ದೇಹಗಳ ಮರಣೋತ್ತರ ಪರೀಕ್ಷೆ ಮುಗಿಸಿದ್ದ ಸಿಬ್ಬಂದಿ 20ನೇ ಶವಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು’ ಎಂದು ಹೇಳುವ ಮೂಲಕ ಅವರು ಅವಘಡದ ಭೀಕರತೆಯನ್ನು ಬಿಚ್ಚಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.