ADVERTISEMENT

ಹಾಥರಸ್ ಕಾಲ್ತುಳಿತ ದುರಂತ; ಆಸ್ಪತ್ರೆ ಆವರಣದಲ್ಲಿ ಶವಗಳ ರಾಶಿ, ಸಂಬಂಧಿಕರ ಆಕ್ರಂದನ

ಭೀಕರತೆಯನ್ನು ವಿವರಿಸಿದ ಪ್ರತ್ಯಕ್ಷದರ್ಶಿಗಳು

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 20:38 IST
Last Updated 2 ಜುಲೈ 2024, 20:38 IST
<div class="paragraphs"><p>ಹಾಥರಸ್‌ ಜಿಲ್ಲೆಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಶವಗಳನ್ನು ಆಂಬುಲೆನ್ಸ್‌ನಲ್ಲಿ ಸಿಕಂದ್ರ ರಾವ್‌ ಆಸ್ಪತ್ರೆಗೆ ಸಾಗಿಸಲಾಯಿತು </p></div>

ಹಾಥರಸ್‌ ಜಿಲ್ಲೆಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಶವಗಳನ್ನು ಆಂಬುಲೆನ್ಸ್‌ನಲ್ಲಿ ಸಿಕಂದ್ರ ರಾವ್‌ ಆಸ್ಪತ್ರೆಗೆ ಸಾಗಿಸಲಾಯಿತು

   

–ಪಿಟಿಐ ಚಿತ್ರ

ಲಖನೌ: ಆಸ್ಪತ್ರೆಯ ಆವರಣದಲ್ಲಿ ಸಾಲಾಗಿ ಇರಿಸಿದ್ದ ಶವಗಳ ಬಳಿ ಕುಟುಂಬ ಸದಸ್ಯರ ಆಕ್ರಂದನ, ಶವಗಳ ಸಾಲಿನಲ್ಲಿ ತಮ್ಮವರು ಇದ್ದಾರೆಯೇ ಎಂದು ಹುಡುಕಾಡುತ್ತಿದ್ದ ಸಂಬಂಧಿಕರು, ಗಾಯಾಳುಗಳನ್ನು ಹೊತ್ತು ಬರುವ ಆಂಬುಲೆನ್ಸ್‌ಗಳು... 

ADVERTISEMENT

ಉತ್ತರ ಪ್ರದೇಶದ ಹಾಥರಸ್ ಜಿಲ್ಲೆಯ ಫೂಲರಾಯ್ ಗ್ರಾಮದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಯ ಭಯಾನಕತೆಯನ್ನು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದು ಹೀಗೆ. ಮಂಗಳವಾರ ಅಯೋಜಿಸಿದ್ದ ‘ಸತ್ಸಂಗ’ ಕಾರ್ಯಕ್ರಮವು ಹಲವರಿಗೆ ದುರಂತಮಯವಾಗಿ ಪರಿಣಮಿಸಿದೆ. 

‘ಆಸ್ಪತ್ರೆಯ ನೆಲದಲ್ಲಿ ಶವಗಳನ್ನು ಸಾಲಾಗಿ ಇಡಲಾಗಿದ್ದರೆ, ತಮ್ಮವರನ್ನು ಕಳೆದುಕೊಂಡವರ ಗೋಳಾಟ ಮುಗಿಲುಮುಟ್ಟಿತ್ತು. ಶವಗಳು ಮತ್ತು ಗಾಯಾಳುಗಳನ್ನು ಹೊತ್ತು ತಂದ ಆಂಬುಲೆನ್ಸ್‌ಗಳ ಸೈರನ್‌ ಕೂಡಾ ಅವರ ಆಕ್ರಂದನದ ಮುಂದೆ ಯಾರಿಗೂ ಕೇಳಿಸುತ್ತಿರಲಿಲ್ಲ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

‘ವಿಶ್ವಹರಿ ಭೋಲೆಬಾಬಾ ಅವರ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಅಷ್ಟೊಂದು ಜನರು ಒಂದೆಡೆ ಸೇರುವಷ್ಟು ಸ್ಥಳಾವಕಾಶ ಅಲ್ಲಿರಲಿಲ್ಲ. ಇದರಿಂದ ಸಲೀಸಾಗಿ ಅತ್ತಿತ್ತ ನಡೆದಾಡಲೂ ಅವಕಾಶವಿರಲಿಲ್ಲ’ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳೆಯೊಬ್ಬರು ತಿಳಿಸಿದರು. ಹರಿಯಾಣ, ರಾಜಸ್ಥಾನ ಮತ್ತು ಮಧ್ಯಪ್ರದೇಶದಿಂದಲೂ ಭಕ್ತರು ಬಂದಿದ್ದರು ಎಂದು ಅವರು ಹೇಳಿದರು.

ಕಾಲ್ತುಳಿತ ಹೇಗೆ ಸಂಭವಿಸಿತು ಎಂಬುದಕ್ಕೆ ವಿಭಿನ್ನ ಕಾರಣಗಳನ್ನು ನೀಡಿದ್ದಾರೆ. ಕಾರ್ಯಕ್ರಮದ ತಾಣದಲ್ಲಿ ಅತಿಯಾದ ಸೆಖೆಯಿದ್ದ ಕಾರಣ ಹಲವರು ಹೊರಹೋಗಲು ಪ್ರಯತ್ನಿಸಿದ್ದು ಕಾಲ್ತುಳಿತಕ್ಕೆ ಕಾರಣ ಎಂದು ಕೆಲವರು ಹೇಳಿದ್ದಾರೆ. ‘ಸತ್ಸಂಗ’ ನಡೆಯುತ್ತಿದ್ದ ಸಂದರ್ಭದಲ್ಲೇ ಕೆಲವರು ಬಿಸಿಲಿನ ಝಳಕ್ಕೆ ಬಳಲಿ ಮೂರ್ಛೆ ಹೋದರು. ಇದರಿಂದ ಆತಂಕಕ್ಕೆ ಒಳಗಾದ ಇತರರು ಒಮ್ಮೆಲೇ ಹೊರಹೋಗಲು ನಿರ್ಧರಿಸಿದ್ದು ಕಾಲ್ತುಳಿತಕ್ಕೆ ಕಾರಣವಾಯಿತು’ ಎಂದಿದ್ದಾರೆ.

ಜಿಲ್ಲಾಡಳಿತವು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ತಕ್ಷಣ ಪ್ರಾರಂಭಿಸಲಿಲ್ಲ ಎಂಬ ದೂರುಗಳೂ ಕೇಳಿಬಂದಿವೆ. ಕಾರ್ಯಕ್ರಮಕ್ಕೆ ಅನುಮತಿ ಇತ್ತಾದರೂ, ಅಲ್ಲಿ ಇತರ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿತ್ತೇ ಎಂಬುದು ಸ್ಪಷ್ಟವಾಗಿಲ್ಲ. ಈ ಕಾರ್ಯಕ್ರಮಕ್ಕೆ ಬರುವ ಭಕ್ತರ ಸಂಖ್ಯೆಯ ಬಗ್ಗೆ ಸ್ಥಳೀಯ ಆಡಳಿತಕ್ಕೆ ಯಾವುದೇ ಮಾಹಿತಿ ಇರಲಿಲ್ಲ ಎನ್ನಲಾಗಿದೆ.

‘ಕಾಲ್ತುಳಿತಕ್ಕೆ ನಿಖರ ಕಾರಣ ಏನು ಎಂಬುದು ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೊರಹೋಗದಂತೆ ಭಕ್ತರನ್ನು ತಡೆದಿರಿಸಲಾಗಿತ್ತು: ‘ಸತ್ಸಂಗ’ ಕಾರ್ಯಕ್ರಮ ನಡೆಸಿದ ಭೋಲೆ ಬಾಬಾ ಅವರ ಕಾರು ಸ್ಥಳದಿಂದ ಹೊರಡುವವರೆಗೂ ಭಕ್ತರನ್ನು ಸ್ಥಳದಿಂದ ಹೋಗದಂತೆ ತಡೆದಿರಿಸಲಾಗಿತ್ತು. ಕಿರಿದಾದ ಜಾಗದಲ್ಲಿ ಕಾರ್ಯ‌ಕ್ರಮ ಅಯೋಜಿಸಲಾಗಿತ್ತು. ಸಣ್ಣ ಜಾಗದಲ್ಲಿ ನೂರಾರು ಮಂದಿ ಸೇರಿದ್ದರಿಂದ ನೂಕುನುಗ್ಗಲು ಉಂಟಾಯಿತು ಎಂದು ಮೂಲಗಳು ತಿಳಿಸಿವೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಗಾಯಾಳುಗಳ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ.

ರಾಜಕಾರಣಿಗಳ ಜತೆ ನಂಟು

ವಿಶ್ವಹರಿ ಭೋಲೆಬಾಬಾ ಅವರು ಹಲವು ಪ್ರಭಾವಿ ರಾಜಕಾರಣಿಗಳ ಜತೆ ನಂಟು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜಕಾರಣಿಗಳ ಜತೆ ಇರುವ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅವರು ಪ್ರತಿ ಮಂಗಳವಾರ ಇದೇ ರೀತಿಯ ಕಾರ್ಯಕ್ರಮ ಅಯೋಜಿಸುತ್ತಾ ಬಂದಿದ್ದಾರೆ. 

ಉತ್ತರ ಪ್ರದೇಶದ ಎಟಾ ಜಿಲ್ಲೆಯವರಾದ ಭೋಲೆಬಾಬಾ, ಅಂಗರಕ್ಷಕರ ದೊಡ್ಡ ‘ಸೇನೆ’ಯನ್ನೇ ಹೊಂದಿದ್ದಾರೆ. ಉತ್ತರ ಪ್ರದೇಶ ಪೊಲೀಸ್‌ ಇಲಾಖೆಯಲ್ಲಿದ್ದ ಅವರು ಸ್ವಯಂ ನಿವೃತ್ತಿ ಪಡೆದು ’ಕಥಾವಾಚಕ’ ಆಗಿ ಬದಲಾಗಿದ್ದರು. 

ಕಾಲ್ತುಳಿತ ಘಟನೆ ನಡೆದ ಬಳಿಕ ಅವರು ಹಾಗೂ ಕಾರ್ಯಕ್ರಮದ ಆಯೋಜಕರು ತಲೆಮರೆಸಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಈ ಹಿಂದೆ ನಡೆದಿದ್ದ ಘಟನೆಗಳು
  • ಮಾರ್ಚ್‌ 31, 2023: ಇಂದೋರ್‌ನಲ್ಲಿ ರಾಮನವಮಿ ವೇಳೆ ನಡೆದ ದುರ್ಘಟನೆಯಲ್ಲಿ 36 ಮಂದಿ ಸಾವು. ಹಳೆಯ ಕಾಲದ ಬಾವಿಯ ಮೆಟ್ಟಿಲು ಕುಸಿದಾಗ, ಭಕ್ತರು ಬಾವಿಗೆ ಬಿದ್ದು ದುರಂತ ಸಂಭವಿಸಿತ್ತು.

  • ಜನವರಿ 1, 2022: ಜಮ್ಮು ಮತ್ತು ಕಾಶ್ಮೀರದ ವೈಷ್ಣೋದೇವಿ ಮಂದಿರದಲ್ಲಿ ಉಂಟಾದ ನೂಕುನುಗ್ಗಲು ಹಾಗೂ ಕಾಲ್ತುಳಿತದಲ್ಲಿ 12 ಮಂದಿ ಸಾವು.

  • ಜುಲೈ 14, 2015: ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ‘ಪುಷ್ಕರಂ’ ಉತ್ಸವದ ಸಮಯದಲ್ಲಿ ಗೋದಾವರಿ ನದಿ ದಡದ ಸ್ನಾನಘಟ್ಟದಲ್ಲಿ ಕಾಲ್ತುಳಿತ ಸಂಭವಿಸಿ 27 ಮಂದಿ ಸಾವನ್ನಪ್ಪಿ, 20 ಮಂದಿಗೆ ಗಾಯ.

  • ಅಕ್ಟೋಬರ್‌ 3, 2014: ಪಟ್ನಾದ ಗಾಂಧಿ ಮೈದಾನದಲ್ಲಿ ದಸರಾ ಉತ್ಸವದ ವೇಳೆ ಕಾಲ್ತುಳಿತ ಸಂಭವಿಸಿ 32 ಮಂದಿ ಸಾವು. 26ಕ್ಕೂ ಅಧಿಕ ಮಂದಿಗೆ ಗಾಯ.

  • ಅಕ್ಟೋಬರ್‌ 13, 2013: ಮಧ್ಯಪ್ರದೇಶದ ದತಿಯಾ ಜಿಲ್ಲೆಯ ರತ್ನಗಢ ದೇವಾಲಯದ ಸಮೀಪ ನವರಾತ್ರಿ ಉತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 115 ಮಂದಿ ಮೃತಪಟ್ಟು, 100ಕ್ಕೂ ಅಧಿಕ ಮಂದಿಗೆ ಗಾಯ. ನೂರಾರು ಭಕ್ತರು ಇದ್ದ ಸೇತುವೆ ಕುಸಿಯಲಿದೆ ಎಂಬ ವದಂತಿ ಹಬ್ಬಿದ್ದು ದುರ್ಘಟನೆಗೆ ಕಾರಣ.

  • ನವೆಂಬರ್‌ 19, 2012: ಪಟ್ನಾ ಸಮೀಪ ಗಂಗಾ ನದಿ ದಡದ ಅದಾಲತ್ ಘಾಟ್‌ನಲ್ಲಿ ಛಠ್‌ ಪೂಜೆ ಸಮಯದಲ್ಲಿ ಕಾಲ್ತುಳಿತ ಘಟನೆಯಲ್ಲಿ 20 ಮಂದಿ ಸಾವು. ತಾತ್ಕಾಲಿಕ ಸೇತುತೆ ಕುಸಿದದ್ದರಿಂದ ನೂಕುನುಗ್ಗಲು ಉಂಟಾಗಿತ್ತು.

  • ನವೆಂಬರ್‌ 8, 2011: ಹರಿದ್ವಾರದಲ್ಲಿ ಗಂಗಾ ನದಿ ದಡದ ಹರ್‌–ಕೀ–ಪೌಢೀ ಘಾಟ್‌ನಲ್ಲಿ ಕಾಲ್ತುಳಿತದಿಂದ 20 ಮಂದಿ ಸಾವು.

  • ಜನವರಿ 14, 2011: ಶಬರಿಮಲೆ ದೇವಸ್ಥಾನದ ಬಳಿ ಉಂಟಾದ ನೂಕುನುಗ್ಗಲು, ಕಾಲ್ತುಳಿತದಿಂದ 104 ಯಾತ್ರಿಕರು ಮೃತಪಟ್ಟು, 40ಕ್ಕೂ ಅಧಿಕ ಮಂದಿಗೆ ಗಾಯ. ಕೇರಳದ ಇಡುಕ್ಕಿ ಜಿಲ್ಲೆಯ ಪುಲ್‌ಮೇಡ್‌ ಅರಣ್ಯಪ್ರದೇಶದ ರಸ್ತೆ ಮೂಲಕ ಹಿಂದಿರುಗುತ್ತಿದ್ದ ಭಕ್ತರ ಮೇಲೆ ಜೀಪೊಂದು ನುಗ್ಗಿದ್ದರಿಂದ ನೂಕುನುಗ್ಗಲು ಉಂಟಾಗಿತ್ತು.

  • ಮಾರ್ಚ್‌ 4, 2010: ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ರಾಮ್‌ ಜಾನಕಿ ದೇವಾಲಯದಲ್ಲಿ ಕಾಲ್ತುಳಿತದಿಂದ 63 ಭಕ್ತರ ಸಾವು. ‘ಸ್ವಯಂಘೋಷಿತ ದೇವಮಾನ’ರೊಬ್ಬರು ಉಚಿತವಾಗಿ ವಿತರಿಸಿದ ಬಟ್ಟೆ ಹಾಗೂ ಆಹಾರ ಪಡೆಯಲು ಭಕ್ತರು ಸೇರಿದ್ದ ಜಾಗದಲ್ಲಿ ನಡೆದ ದುರಂತ.

  • ಸೆಪ್ಟೆಂಬರ್‌ 30, 2008: ರಾಜಸ್ಥಾನದ ಜೋಧಪುರ ಜಿಲ್ಲೆಯ ಚಾಮುಂಡಾ ದೇವಿ ದೇವಾಲಯದಲ್ಲಿ ಬಾಂಬ್‌ ಸ್ಫೋಟದ ವದಂತಿ ಹರಡಿದ್ದರಿಂದ ಕಾಲ್ತುಳಿತ ಉಂಟಾಗಿ ಸುಮಾರು 250 ಭಕ್ತರು ಮೃತಪಟ್ಟು, 60ಕ್ಕೂ ಅಧಿಕ ಮಂದಿಗೆ ಗಾಯ.

  • ಆಗಸ್ಟ್‌ 3, 2008: ಹಿಮಾಚಲ ಪ್ರದೇಶದ ಬಿಲಾಸಪುರ ಜಿಲ್ಲೆಯ ನೈನಾದೇವಿ ದೇವಾಲಯದಲ್ಲಿ ಕಾಲ್ತುಳಿತ ದುರಂತದಲ್ಲಿ 162 ಮಂದಿ ಬಲಿಯಾಗಿ, 47 ಮಂದಿಗೆ ಗಾಯ. ಬಂಡೆ ಕುಸಿಯಲಿದೆ ಎಂಬ ವದಂತಿ ಹರಡಿದ್ದು ದುರ್ಘಟನೆಗೆ ಕಾರಣ.

  • ಜನವರಿ 25, 2005: ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಮಾಂಢರದೇವಿ ದೇವಾಲಯದಲ್ಲಿ ವಾರ್ಷಿಕ ತೀರ್ಥಯಾತ್ರೆ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 340 ಮಂದಿ ಸಾವಿಗೀಡಾಗಿ ನೂರಾರು ಮಂದಿಗೆ ಗಾಯ. ಭಕ್ತರು ತೆಂಗಿನಕಾಯಿ ಒಡೆಯುವ ಜಾಗದಲ್ಲಿ ನಿರ್ಮಿಸಿದ್ದ ಮೆಟ್ಟಿಲುಗಳಿಂದ ಕೆಲವರು ಜಾರಿಬಿದ್ದದ್ದು ಘಟನೆಗೆ ಕಾರಣ.

  • ಆಗಸ್ಟ್‌ 27, 2003: ಮಹಾರಾಷ್ಟ್ರದ ನಾಶಿಕ್‌ ಜಿಲ್ಲೆಯಲ್ಲಿ ಕುಂಭಮೇಳದ ಪುಣ್ಯ ಸ್ನಾನದ ವೇಳೆ ಉಂಟಾದ ಕಾಲ್ತುಳಿತದಲ್ಲಿ 39 ಮಂದಿ ಸಾವಿಗೀಡಾಗಿ, ಸುಮಾರು 140 ಜನರು ಗಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.