ನೋಯ್ಡಾ: ಹಾಥರಸ್ ಕಾಲ್ತುಳಿತ ಪ್ರಕರಣದ ತನಿಖೆ ನಡೆಸುತ್ತಿರುವ ಉತ್ತರ ಪ್ರದೇಶ ಸರ್ಕಾರದ ತನಿಖಾ ಸಮಿತಿಯು ಇಂದು (ಭಾನುವಾರ) ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಸ್ಥಳೀಯರು ಸೇರಿದಂತೆ ಸಾಕ್ಷಿಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ.
ಅಲಹಾಬಾದ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್ ಶ್ರೀವಾಸ್ತವ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಮೂವರು ಸದಸ್ಯರ ಸಮಿತಿಯಲ್ಲಿ ಮಾಜಿ ಐಎಎಸ್ ಅಧಿಕಾರಿ ಹೇಮಂತ್ ರಾವ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ಭವೇಶ್ ಕುಮಾರ್ ಇದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀವಾಸ್ತವ, ‘ಎರಡು ತಿಂಗಳೊಳಗೆ ತನಿಖಾ ವರದಿ ಸಲ್ಲಿಸುತ್ತೇವೆ. ‘ಸತ್ಸಂಗ’ದ ಆಯೋಜನೆಗೆ ರಾಜಕೀಯ ಪಕ್ಷದಿಂದ ಹಣ ಸಂದಾಯವಾಗಿರುವ ಬಗ್ಗೆ ತನಿಖೆ ನಡೆಸುತ್ತಿದ್ದೇವೆ’ ಎಂದು ಹೇಳಿದ್ದಾರೆ.
ಜುಲೈ 2ರಂದು ಉತ್ತರ ಪ್ರದೇಶದ ಹಾಥರಸ್ ಜಿಲ್ಲೆಯ ಫೂಲರಾಯ್ ಗ್ರಾಮದಲ್ಲಿ ನಡೆದ ‘ಸತ್ಸಂಗ’ದ ವೇಳೆ ಕಾಲ್ತುಳಿತ ದುರಂತ ಸಂಭವಿಸಿತ್ತು. ಘಟನೆಯಲ್ಲಿ ಮಹಿಳೆಯರು ಸೇರಿದಂತೆ 121 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.
‘ಸತ್ಸಂಗ’ವನ್ನು ಉದ್ದೇಶಿಸಿ ಸ್ವಯಂಘೋಷಿತ ದೇವಮಾನವ ಸೂರಜ್‌ಪಾಲ್ ಅಲಿಯಾಸ್ ನಾರಾಯಣ ಸಾಕರ್ ಹರಿ ಅಲಿಯಾಸ್ ಭೋಲೆ ಬಾಬಾ ಮಾತನಾಡಿದ್ದರು. ಬಳಿಕ ಅವರ ಬೆಂಗಾವಲು ವಾಹನಗಳ ಸಂಚಾರಕ್ಕಾಗಿ ಒಂದು ದ್ವಾರವನ್ನು ಆಯೋಜಕರು ಮುಚ್ಚಿದ್ದರಿಂದ ಮತ್ತೊಂದು ದ್ವಾರದ ಮೇಲೆ ಒತ್ತಡ ಹೆಚ್ಚಾಯಿತು. ಇದು ಕಾಲ್ತುಳಿತಕ್ಕೆ ಕಾರಣವಾಯಿತು ಎಂದು ಕೆಲವು ವರದಿಗಳು ಹೇಳಿವೆ.
ಮುಖ್ಯ ಆರೋಪಿ ಪೊಲೀಸರಿಗೆ ಶರಣು
ಹಾಥರಸ್‌ನಲ್ಲಿ ನಡೆದಿದ್ದ ಕಾಲ್ತುಳಿತ ಅವಘಡದ ಮುಖ್ಯ ಆರೋಪಿ ದೇವ್‌ಪ್ರಕಾಶ್ ಮಧುಕರ್ ಪೊಲೀಸರಿಗೆ ಶರಣಾಗಿದ್ದಾನೆ. ಮಧುಕರ್ ಆ ದಿನ ಸತ್ಸಂಗ ಕಾರ್ಯಕ್ರಮದ ‘ಮುಖ್ಯ ಸೇವಾದಾರ’ನಾಗಿದ್ದನು. ಸಿಕಂದ್ರಾ ರಾವ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದಾಖಲಿಸಿದ್ದ ಎಫ್‌ಐಆರ್‌ನಲ್ಲಿಯೂ ಈತನೊಬ್ಬನ ಹೆಸರನ್ನೇ ಉಲ್ಲೇಖಿಸಲಾಗಿತ್ತು.
ಮಧುಕರ್ ಪರ ವಕೀಲ ಎ.ಪಿ.ಸಿಂಗ್ ಅವರು, ‘ನನ್ನ ಕಕ್ಷಿದಾರ ದೆಹಲಿಯಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ. ಅವರಿ ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು’ ಎಂದು ವಿಡಿಯೊ ಸಂದೇಶ ನೀಡಿದ್ದಾರೆ. ‘ಮುಖ್ಯ ಸೇವಾದಾರನ ಸುಳಿವು ನೀಡಿದವರಿಗೆ ₹1 ಲಕ್ಷ ನಗದು ಬಹುಮಾನ ನೀಡಲಾಗುವುದು’ ಎಂದು ಉತ್ತರ ಪ್ರದೇಶ ಸರ್ಕಾರ ಪ್ರಕಟಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.