ADVERTISEMENT

ಹಾಥರಸ್‌ ಕಾಲ್ತುಳಿತ: ತನಿಖೆ ಚುರುಕು, ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಸಂಗ್ರಹ

ಸ್ಥಳೀಯರು, ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಸಂಗ್ರಹಿಸಿದ ತನಿಖಾ ತಂಡ

ಪಿಟಿಐ
Published 7 ಜುಲೈ 2024, 15:10 IST
Last Updated 7 ಜುಲೈ 2024, 15:10 IST
ಕಾಲ್ತುಳಿತ ದುರ್ಘಟನೆ ನಡೆದಿದ್ದ ಸ್ಥಳ
ಕಾಲ್ತುಳಿತ ದುರ್ಘಟನೆ ನಡೆದಿದ್ದ ಸ್ಥಳ   

ನೋಯ್ಡಾ: ಉತ್ತರ ಪ್ರದೇಶದ ಹಾಥರಸ್‌ ಜಿಲ್ಲೆಯ ಫೂಲರಾಯ್ ಗ್ರಾಮದಲ್ಲಿ ‌ನಡೆದಿದ್ದ ಕಾಲ್ತುಳಿತ ಘಟನೆಯ ತನಿಖೆ ನಡೆಸುತ್ತಿರುವ ಅಧಿಕಾರಿಗಳ ತಂಡ ಭಾನುವಾರ ಸ್ಥಳೀಯರು, ಪೊಲೀಸ್‌ ಅಧಿಕಾರಿಗಳು ಮತ್ತು ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಸಂಗ್ರಹಿಸಿತು. 

ಜುಲೈ 2ರಂದು ನಡೆದಿದ್ದ ಅವಘಡದಲ್ಲಿ 121 ಜನರು ಮೃತಪಟ್ಟಿದ್ದರು. ಘಟನೆ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದ ಉತ್ತರ ಪ್ರದೇಶ ಸರ್ಕಾರ, ಮೂವರು ಸದಸ್ಯರ ಸಮಿತಿಯನ್ನು ನೇಮಿಸಿತ್ತು. ಅಲಹಾಬಾದ್‌ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬ್ರಿಜೇಶ್‌ ಕುಮಾರ್‌ ಶ್ರೀವಾಸ್ತವ ಅವರ ನೇತೃತ್ವದ ಸಮಿತಿಯಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ಹೇಮಂತ್‌ ರಾವ್‌ ಮತ್ತು ನಿವೃತ್ತ ಐಪಿಎಸ್‌ ಅಧಿಕಾರಿ ಭವೇಶ್‌ ಕುಮಾರ್ ಇದ್ದಾರೆ.

ಶನಿವಾರ ಹಾಥರಸ್‌ ತಲುಪಿದ್ದ ತನಿಖಾ ತಂಡದ ಸದಸ್ಯರು, ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಹಾಥರಸ್‌ನ ಪಿಡಬ್ಲ್ಯುಡಿ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದ ಅವರು ಭಾನುವಾರವೂ ತನಿಖೆಯನ್ನು ಮುಂದುವರಿಸಿದರು. 

ADVERTISEMENT

‘ಎರಡು ತಿಂಗಳ ಒಳಗಾಗಿ ತನಿಖಾ ವರದಿಯನ್ನು ಸಲ್ಲಿಸುವಂತೆ ನಮಗೆ ಸೂಚಿಸಲಾಗಿದೆ’ ಎಂದು ಘಟನೆ ನಡೆದ ತಾಣಕ್ಕೆ ಶನಿವಾರ ಭೇಟಿ ನೀಡಿದ ಬಳಿಕ ಶ್ರೀವಾಸ್ತವ ಹೇಳಿದರು. ಹಾಥರಸ್‌ ಜಿಲ್ಲಾಧಿಕಾರಿ ಆಶೀಶ್‌ ಕುಮಾರ್‌ ಮತ್ತು ಎಸ್‌ಪಿ ನಿಪುನ್‌ ಅಗರವಾಲ್‌ ಅವರು ತನಿಖಾ ತಂಡಕ್ಕೆ ಸಾಥ್‌ ನೀಡಿದರು.

ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ದೇವ್‌ಪ್ರಕಾಶ್‌ ಮಧುಕರ್‌ ಸೇರಿದಂತೆ ಒಟ್ಟು ಒಂಬತ್ತು ಮಂದಿಯನ್ನು ಇದುವರೆಗೆ ಬಂಧಿಸಲಾಗಿದೆ. ಮಧುಕರ್‌ ಅವರು ನಾರಾಯಣ ಸಾಕರ್‌ ಹರಿ ಅಲಿಯಾಸ್‌ ಬೋಲೆ ಬಾಬಾ ಅವರ ಕಾರ್ಯಕ್ರಮಗಳಿಗೆ ನಿಧಿ ಸಂಗ್ರಹ ಮಾಡುತ್ತಿದ್ದರು. ಬೋಲೆ ಬಾಬಾ ಅವರ ‘ಸತ್ಸಂಗ’ ಕಾರ್ಯಕ್ರಮದ ವೇಳೆ ಕಾಲ್ತುಳಿತ ಸಂಭವಿಸಿತ್ತು. 

ಯಾರನ್ನೇ ಆದರೂ ವಿಚಾರಣೆಗೆ ಒಳಪಡಿಸುವೆವು: ತನಿಖಾ ತಂಡವು ಬೋಲೆ ಬಾಬಾ ಅವರ ವಿಚಾರಣೆ ನಡೆಸಲಿದೆಯೇ ಎಂಬ ಪ್ರಶ್ನೆಗೆ, ‘ಘಟನೆಗೆ ಸಂಬಂಧಿಸಿದಂತೆ ಅಗತ್ಯವಿರುವ ಎಲ್ಲರನ್ನೂ ವಿಚಾರಣೆಗೆ ಒಳಪಡಿಸುತ್ತೇವೆ’ ಎಂದು ಭವೇಶ್‌ ಕುಮಾರ್‌ ಹೇಳಿದರು.

ಕಾಲ್ತುಳಿತ ಘಟನೆಯ ತನಿಖೆಗೆ ಉತ್ತರ ಪ್ರದೇಶ ಸರ್ಕಾರವು ಪ್ರತ್ಯೇಕವಾಗಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ. ಆಗ್ರಾ ವಲಯದ ಎಡಿಜಿಪಿ ಅನುಪಮ್ ಕುಲಶ್ರೇಷ್ಠ ಅವರು ಎಸ್‌ಐಟಿ ನೇತೃತ್ವ ವಹಿಸಿದ್ದಾರೆ.

ಪರಿಹಾರ ಮೊತ್ತ ಹೆಚ್ಚಿಸಿ: ರಾಹುಲ್‌ ಮನವಿ

ನವದೆಹಲಿ: ಹಾಥರಸ್‌ ಕಾಲ್ತುಳಿತ ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಘೋಷಿಸಿರುವ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಉತ್ತರ ಪ್ರದೇಶ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮೃತಪಟ್ಟವರ ಕುಟುಂಬ ಸದಸ್ಯರಿಗೆ ₹2 ಲಕ್ಷ ಹಾಗೂ ಗಾಯಾಳುಗಳ ಚಿಕಿತ್ಸೆಗೆ ₹50 ಸಾವಿರ ನೀಡುವುದಾಗಿ ಉತ್ತರ ಪ್ರದೇಶ ಸರ್ಕಾರ ಘೋಷಿಸಿತ್ತು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಭಾನುವಾರ ಪತ್ರ ಬರೆದಿರುವ ರಾಹುಲ್ ‘ಸರ್ಕಾರವು ಘೋಷಿಸಿರುವ ಪರಿಹಾರ ಮೊತ್ತ ತುಂಬಾ ಕಡಿಮೆಯಾಯಿತು. ಪರಿಹಾರ ಮೊತ್ತವನ್ನು ಹೆಚ್ಚಿಸಿ ತಕ್ಷಣವೇ ಅದನ್ನು ವಿತರಿಸಬೇಕು’ ಎಂದು ಮನವಿ ಮಾಡಿದ್ದಾರೆ.  ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ದೊರೆಯುವುದನ್ನು ಖಾತರಿಪಡಿಸಬೇಕು ಎಂದೂ ಆಗ್ರಹಿಸಿದ್ದಾರೆ. ರಾಹುಲ್‌ ಅವರು ದುರಂತದಲ್ಲಿ ಮೃತಪಟ್ಟವರ ಕುಟುಂಬಗಳ ಸದಸ್ಯರನ್ನು ಶುಕ್ರವಾರ ಭೇಟಿಯಾಗಿದ್ದರು.

‘ವಿಷ ತುಂಬಿದ್ದ ಕ್ಯಾನ್ ತಂದಿದ್ದರು’

‘ಸತ್ಸಂಗ ಕಾರ್ಯಕ್ರಮಕ್ಕೆ ಕೆಲವರು ವಿಷಕಾರಿ ವಸ್ತು ತುಂಬಿದ್ದ ಕ್ಯಾನ್‌ಗಳನ್ನು ತಂದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ನನ್ನಲ್ಲಿ ತಿಳಿಸಿದ್ದಾರೆ’ ಎಂದು ಬೋಲೆ ಬಾಬಾ ಅವರ ವಕೀಲ ಎ.ಪಿ.ಸಿಂಗ್‌ ಹೇಳಿದ್ದಾರೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೋಲೆ ಬಾಬಾ ಅವರ ಜನಪ್ರಿಯತೆ ಹೆಚ್ಚುತ್ತಿರುವುದನ್ನು ಸಹಿಸದ ಕೆಲವರು ಪಿತೂರಿ ನಡೆಸಿ ಕಾಲ್ತುಳಿತ ಘಟನೆ ಉಂಟಾಗುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು. ‘ವಿಷಕಾರಿ ವಸ್ತು ತುಂಬಿದ್ದ ಕ್ಯಾನ್‌ಗಳೊಂದಿಗೆ 15–16 ಮಂದಿ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಜನದಟ್ಟಣೆಯಲ್ಲಿ ಅವರು ಆ ಕ್ಯಾನ್‌ಗಳನ್ನು ತೆರೆದಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಗಳನ್ನು ನಾನು ಗಮನಿಸಿದ್ದು ಜನರು ಉಸಿರುಕಟ್ಟಿ ಸಾವನ್ನಪ್ಪಿದ್ದಾರೆಯೇ ಹೊರತು ಗಾಯಗಳಿಂದಲ್ಲ ಎಂಬ ಅಂಶ ವರದಿಯಲ್ಲಿದೆ’ ಎಂದಿದ್ದಾರೆ.  ‘ವಿಷಕಾರಿ ವಸ್ತು ತಂದಿದ್ದವರು ಪರಾರಿಯಾಗಲು ಬಳಸಿದ್ದ ವಾಹನಗಳನ್ನು ಕಾರ್ಯಕ್ರಮ ನಡೆದ ತಾಣದ ಬಳಿಯೇ ನಿಲ್ಲಿಸಲಾಗಿತ್ತು. ಇದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ನಮ್ಮಲ್ಲಿದ್ದು ಎಲ್ಲವನ್ನೂ ಸಲ್ಲಿಸುತ್ತೇವೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.