ನವದೆಹಲಿ: 121 ಮಂದಿಯ ಸಾವಿಗೆ ಕಾರಣವಾದ ಹಾಥರಸ್ ಕಾಲ್ತುಳಿತ ಪ್ರಕರಣವನ್ನು ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ಅಲ್ಲದೆ ಈ ಬಗ್ಗೆ ಅಲಹಾಬಾದ್ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿ ಎಂದು ಅರ್ಜಿದಾರರಿಗೆ ನಿರ್ದೇಶಿಸಿದೆ.
ಜುಲೈ 2ರಂದು ನಡೆದ ಈ ಘಟನೆ ಸಂಬಂಧ ತನಿಖೆಗೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಐದು ಮಂದಿಯ ತಜ್ಞರ ಸಮಿತಿ ರಚಿಸಬೇಕು ಎಂದು ವಕೀಲರಾದ ವಿಶಾಲ್ ಮಿಶ್ರಾ ಪಿಐಎಲ್ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ ಪರ್ಡಿವಾಲ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠವು, ‘ಇಂಥ ಘಟನೆಗಳು ಮನಸ್ಸನ್ನು ತಲ್ಲಣಗೊಳಿಸುವಂಥವು. ಆದರೆ ಇಂಥ ಪ್ರಕರಣಗಳನ್ನು ಎದುರಿಸಲು ಹೈಕೋರ್ಟ್‌ಗಳು ಸನ್ನದ್ದವಾಗಿವೆ’ ಎಂದು ಹೇಳಿತು.
’ಇಂಥ ಪ್ರಕರಣಗಳು ನಡೆದಾಗ ಬೇಕಾದ ವೈದ್ಯಕೀಯ ಸೌಲಭ್ಯಗಳ ಅಲಭ್ಯತೆಯು ಇಡೀ ದೇಶಕ್ಕೆ ಸಂಬಂಧಿಸಿತ ಕಾಳಜಿಯಾಗಿದೆ. ಇದನ್ನು ಸುಪ್ರೀಂ ಕೋರ್ಟ್ ಕೂಡ ಪರಿಗಣಿಸಬಹುದು’ ಎನ್ನುವ ಮಿಶ್ರಾ ಅವರ ವಾದವನ್ನು ಸಿಜೆಐ ಅವರು ಮನ್ನಿಸಲಿಲ್ಲ.
ಸಾಕಾರ್ ವಿಶ್ವಹರಿ ಹಾಗೂ ಭೋಲೆ ಬಾಬಾ ಎಂದೇ ಪ್ರಸಿದ್ಧಾಗಿರುವ ಬಾಬಾ ನಾರಾಯಣ ಹರಿಯವರು ಹಾಥರಸ್‌ನ ಫುಲ್‌ರೈನಲ್ಲಿ ಏರ್ಪಡಿಸಿದ್ದ ಸತ್ಸಂಗದಲ್ಲಿ 2.5 ಲಕ್ಷಕ್ಕೂ ಅಧಿಕ ಭಕ್ತರು ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಕಾಲ್ತುಳಿತ ಉಂಟಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.