ನವದೆಹಲಿ: ‘ಅದಾನಿ ಸಮೂಹದ ಪ್ರಕರಣದಲ್ಲಿ ಹೆಸರು ಕೇಳಿಬಂದಿದ್ದ ವಿದೇಶಿ ಹೂಡಿಕೆ ಕಂಪನಿಗಳು ತಮ್ಮ ನಿಜವಾದ ಮಾಲೀಕ ಯಾರು ಎನ್ನುವ ಕುರಿತು ನಿಮಗೆ ಮಾಹಿತಿ ನೀಡಿದ್ದಾರೆಯೇ?’ ಎಂದು ಕಾಂಗ್ರೆಸ್ ಬುಧವಾರ ಸೆಬಿಯನ್ನು ಪ್ರಶ್ನಿಸಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ತಮ್ಮ ನೈಜ ಮಾಲೀಕ ಯಾರು ಎಂಬ ಮಾಹಿತಿಯನ್ನು ಸೆಬಿಗೆ ನೀಡಲು ಸೆಪ್ಟೆಂಬರ್ 9 ಕೊನೇ ದಿನವಾಗಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೆಬಿಗೆ ಹಲವು ಪ್ರಶ್ನೆಗಳನ್ನು ಕೇಳಿದೆ.
‘ಈ ಮಾಹಿತಿಯನ್ನು ಬಹಿರಂಗಪಡಿಸುವ ಹೊಸ ನಿಯಮವನ್ನು ಎರಡು ತಿಂಗಳೊಳಗೆ ಜಾರಿಗೆ ತನ್ನಿ ಎಂದು ಸುಪ್ರೀಂ ಕೋರ್ಟ್ ನಿಮಗೆ ನಿರ್ದೇಶನ ನೀಡಿದ 18 ತಿಂಗಳ ಬಳಿಕವೂ ನೀವು ಯಾಕೆ ನಿಯಮವನ್ನು ಜಾರಿಗೆ ತಂದಿರಲಿಲ್ಲ’ ಎಂದೂ ಕಾಂಗ್ರೆಸ್ ಸೆಬಿಗೆ ಪ್ರಶ್ನಿಸಿದೆ.
ಈ ಕುರಿತು ತಮ್ಮ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ನಾವು ಈ ವಿಷಯವನ್ನು ಕೆಲವು ದಿನಗಳ ಹಿಂದೆಯೂ ಪ್ರಸ್ತಾಪಿಸಿದ್ದೆವು. ಯಾಕೆಂದರೆ, ಮಾರಿಷಸ್ ಮೂಲಕ ಎರಡು ಕಂಪನಿಗಳು ಈ ಮಾಹಿತಿಯನ್ನು ಬಹಿರಂಗಪಡಿಸಲು ವಿನಾಯಿತಿ ನೀಡಬೇಕು ಎಂದು ಕೋರಿ ಷೇರು ಮೇಲ್ಮನವಿ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದಾರೆ’ ಎಂದರು.
Cut-off box - ಸೆಬಿಗೆ ಕಾಂಗ್ರೆಸ್‌ನ ಪ್ರಶ್ನೆಗಳು * ಯಾವೆಲ್ಲಾ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಾಹಿತಿಗಳನ್ನು ಬಹಿರಂಗಪಡಿಸಬೇಕಿತ್ತೋ ಆ ಎಲ್ಲ ಹೂಡಿಕೆದಾರರು ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆಯೇ? ಯಾವೆಲ್ಲಾ ಹೂಡಕೆದಾರರು ನಿಮಗೆ ಮಾಹಿತಿ ನೀಡಿಲ್ಲ * ಪ್ರಮುಖವಾಗಿ ‘ಮೋದಾನಿ ಮೆಗಾ ಹಗರಣ’ದಲ್ಲಿ ಹೆಸರು ಕೇಳಿಬಂದಿದ್ದ ವಿದೇಶಿ ಹೂಡಿಕೆದಾರರು ಮಾಹಿತಿ ಬಹಿರಂಗ ಮಾಡಿದ್ದಾರೆಯೇ? * ಎರಡು ತಿಂಗಳಲ್ಲಿ ನಿಯಮವನ್ನು ಜಾರಿಗೆ ತನ್ನಿ ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ ನಿಯಮ ಜಾರಿಗೆ ನೀವು ಯಾಕೆ 18 ತಿಂಗಳು ತೆಗೆದುಕೊಂಡಿರಿ? ಹಗರಣದಲ್ಲಿ ಭಾಗಿಯಾಗಿರುವ ಕಂಪನಿಗಳು ತಮ್ಮ ಷೇರುಗಳನ್ನು ವರ್ಗಾವಣೆ ಮಾಡಿಕೊಳ್ಳಲು ಅನುವು ಮಾಡಿಕೊಡಲು ಹೀಗೆ ಮಾಡಿದಿರೇ? * ಹೀಗೆ ನಿಯಮಗಳನ್ನು ಸಡಿಲಿಸುವುದಾದರೆ ನೀವು ಮೋದಾನಿ ಹಗರಣದ ತನಿಖೆಯು ನ್ಯಾಯಯುತವಾಗಿ ನಡೆಸುತ್ತಿರಿ ಎಂದು ಹೇಗೆ ಖಾತರಿ ಪಡಿಸುತ್ತೀರಿ?
Cut-off box - ‘ಬಡತನದಿಂದ ಸಿರಿತನದವರೆಗೆ ‘ಮೋದಾನಿ ಮ್ಯಾಜಿಕ್’ ‘ಬಡತನದಲ್ಲಿದ್ದ ಖಾಸಗಿ ಕಂಪನಿಯೊಂದು ಈಗ ಸಿರಿವಂತವಾಗಿದೆ. ಇವೆಲ್ಲವೂ ‘ಮೋದಾನಿ ಮ್ಯಾಜಿಕ್’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ. ಈ ಬಗ್ಗೆ ಜೈರಾಮ್ ರಮೇಶ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ‘2018ರಲ್ಲಿ ಡೈಮಂಡ್ ಪವರ್ ಇನ್ಫ್ರಾ ಲಿಮಿಟೆಡ್ ಎನ್ನುವ ಕಂಪನಿಯು ತಾನು ದಿವಾಳಿ ಎಂದು ಘೋಷಿಸಿಕೊಂಡಿತ್ತು. ಈ ಕಂಪನಿಯನ್ನು 2022ರಲ್ಲಿ ಉದ್ಯಮಿ ಗೌತಮ್ ಅದಾನಿ ಅವರ ಭಾವ ₹501 ಕೋಟಿಗೆ ಖರೀದಿಸಿದರು. ಆಗ ಈ ಕಂಪನಿಯ ಮಾರುಕಟ್ಟೆ ಮೌಲ್ಯವು ₹1000 ಕೋಟಿಯಷ್ಟಿತ್ತು’ ಎಂದು ವಿವರಿಸಿದರು. ‘2022ರಲ್ಲಿ ಯಾವುದೇ ವ್ಯವಹಾರವೂ ಇಲ್ಲವಾಗಿದ್ದ ಈ ಕಂಪನಿಯು 2023–24 ಹೊತ್ತಿಗೆ ₹344 ಕೋಟಿ ಆದಾಯ ಗಳಿಸಿತು. ಅದಾನಿ ಗ್ರೂಪ್‌ನ ಕಾರಣದಿಂದಲೇ ಡೈಮಂಡ್ ಪವರ್ ಕಂಪನಿಯೂ ಈ ಮೊತ್ತದ ಆದಾಯಗಳಿಸಿತು. ಈಗ ಈ ಕಂಪನಿಯ ಮೌಲ್ಯ ₹7626 ಕೋಟಿಯಷ್ಟಾಗಿದೆ. ಅಂದರೆ 1000 ಮೌಲ್ಯದ ಹೋಲಿಕೆಯಲ್ಲಿ ಸುಮಾರು ಏಳು ಪಟ್ಟು ಹೆಚ್ಚು’ ಎಂದರು. ‘ಅದಾನಿ ಸಮೂಹದ ವಾರ್ಷಿಕ ವರದಿಯಲ್ಲಿ ಈ ಸಮೂಹದ ಅಂಗಕಂಪನಿಗಳ ಕುರಿತು ಮಾಹಿತಿಗಳನ್ನು ನೀಡಲಾಗುತ್ತದೆ. ಆದರೆ ಡೈಮಂಡ್ ಪವರ್ ಕಂಪನಿಯ ಹೆಸರು ಈ ಪಟ್ಟಿಯಲ್ಲಿಲ್ಲ’ ಎಂದು ಆರೋಪಿಸಿದರು. ‘ಈ ಎಲ್ಲ ಕಾರಣದಿಂದಲೇ ‘ಮೋದಾನಿ ಮೆಗಾ ಹಗರಣ’ದ ಕುರಿತು ಜಂಟಿ ಸಂಸದೀಯ ಸಮಿತಿಯ ತನಿಖೆ ನಡೆಸಲೇಬೇಕು. ಮಾರುಕಟ್ಟೆ ನಿಯಂತ್ರಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮೂಡಲು ಭ್ರಷ್ಟಾಚಾರ ತಡೆಯಲು ಜೊತೆಗೆ ಮಾರುಕಟ್ಟೆಯಲ್ಲಿನ ಏಕಸ್ವಾಮ್ಯವನ್ನು ತಡೆಯಲು ಈ ತನಿಖೆಯ ಅಗತ್ಯವಿದೆ’ ಎಂದು ಜೈರಾಮ್ ರಮೇಶ್ ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.