ನವದೆಹಲಿ: ಅಲೋಪಥಿ ಔಷಧಗಳ ಕುರಿತ ಅಪಾರ್ಥ ಕಲ್ಪಿಸುವ ಜಾಹೀರಾತು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ಪೂರ್ಣ ಮನಸ್ಸಿನಿಂದ ಕ್ಷಮೆ ಕೋರಿ ಪತ್ರಿಕೆಯಲ್ಲಿ ಪ್ರಕಟಿಸಿರುವುದಾಗಿ ಯೋಗ ಗುರು ಬಾಬಾ ರಾಮದೇವ ಹಾಗೂ ಪತಂಜಲಿ ಆಯುರ್ವೇದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಬಾಲಕೃಷ್ಣ ಅವರು ಸುಪ್ರೀಂ ಕೋರ್ಟ್‌ಗೆ ಮಂಗಳವಾರ ಹೇಳಿದ್ದಾರೆ.
ಪತ್ರಿಕೆಯಲ್ಲಿ ಪ್ರಕಟವಾದ ಕ್ಷಮಾಪಣಾ ಜಾಹೀರಾತನ್ನು ಎರಡು ದಿನಗಳ ಒಳಗಾಗಿ ಪೀಠದ ಮುಂದೆ ಹಾಜರುಪಡಿಸುವಂತೆ ಬಾಬಾ ರಾಮದೇವ ಪರ ವಕೀಲ ಮುಕುಲ್ ರೊಹಟಗಿ ಅವರಿಗೆ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠವು ಸೂಚಿಸಿತು.
‘ಕಕ್ಷೀದಾರರಿಂದ ಆಗಿರುವ ಲೋಪಕ್ಕೆ ಹೆಚ್ಚುವರಿಯಾಗಿ ಮತ್ತೊಂದು ಜಾಹೀರಾತನ್ನು ಪ್ರಕಟಿಸಿ ಪೂರ್ಣ ಮನಸ್ಸಿನಿಂದ ಕ್ಷಮೆ ಕೋರಲಾಗುವುದು. ಈಗಾಗಲೇ ದೇಶದ 67 ಪತ್ರಿಕೆಗಳಲ್ಲಿ ಸೋಮವಾರ ಕ್ಷಮಾಪಣಾ ಜಾಹೀರಾತು ಪ್ರಕಟಗೊಂಡಿದೆ’ ಎಂದು ಮುಕುಲ್ ಪೀಠಕ್ಕೆ ತಿಳಿಸಿದರು.
‘ಇಷ್ಟುಮಾತ್ರಕ್ಕೆ ಪ್ರಕರಣದಿಂದ ಸಂಪೂರ್ಣ ಬಿಡುಗಡೆಯಾದೆವು ಎಂದು ಭಾವಿಸುವ ಅಗತ್ಯವಿಲ್ಲ’ ಎಂದು ಎಚ್ಚರಿಕೆ ನೀಡಿದ ಸುಪ್ರೀಂ ಕೋರ್ಟ್, ಮುಂದಿನ ವಿಚಾರಣೆಯನ್ನು ಏ. 30ಕ್ಕೆ ನಿಗದಿಪಡಿಸಿ ಕಲಾಪವನ್ನು ಮುಂದೂಡಿತು.
ಅಪಾರ್ಥ ಕಲ್ಪಿಸುವ ಜಾಹೀರಾತು ಪ್ರಕಟಿಸಿದ ಒಂದು ವಾರದೊಳಗಾಗಿ ಪತಂಜಲಿ ಆಯುರ್ವೇದ ಕಂಪನಿ ವಿರುದ್ಧ ನ್ಯಾಯಾಲಯವು ನ್ಯಾಯಾಂಗ ನಿಂದನೆ ಪ್ರಕರಣ ಆರಂಭಿಸಿತ್ತು. ‘ಅಲೋಪಥಿ ಚಿಕಿತ್ಸಾ ಪದ್ಧತಿಯನ್ನು ಅವಹೇಳನ ಮಾಡಿದ್ದರ ಕುರಿತು ಬಹಿರಂಗವಾಗಿ ಕ್ಷಮೆ ಕೇಳುವ ಮೂಲಕ ಪಶ್ಚಾತ್ತಾಪ ವ್ಯಕ್ತಪಡಿಸಬೇಕು’ ಎಂದು ರಾಮದೇವ್ ಮತ್ತು ಬಾಲಕೃಷ್ಣ ಅವರಿಗೆ ಸುಪ್ರೀಂ ಕೋರ್ಟ್ ಏ. 16ರಂದು ಖಡಕ್ ಎಚ್ಚರಿಕೆ ನೀಡಿತ್ತು.
‘ಕೋವಿಡ್–19 ಪಿಡುಗಿನ ಸಂದರ್ಭದಲ್ಲಿ, ಅಲೋಪಥಿ ಔಷಧಗಳ ಕುರಿತ ರಾಮದೇವ ನೀಡಿದ್ದ ಹೇಳಿಕೆಗಳು ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ಚಿಕಿತ್ಸಾ ವಿಧಾನ ಕುರಿತು ಪೂರ್ವಗ್ರಹದಿಂದ ಕೂಡಿದ್ದವು. ಸಮರ್ಪಕ ಚಿಕಿತ್ಸೆ ಪಡೆಯುವುದರಿಂದ ಜನರು ವಿಮುಖರಾಗುವಂತೆ ಮಾಡುವಂತಿದ್ದವು’ ಎಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಸ್ಥೆಯ (ಐಎಂಎ) ಪಟ್ನಾ ಮತ್ತು ರಾಯಪುರ ಘಟಕಗಳು 2021ರಲ್ಲಿ ರಾಮದೇವ ವಿರುದ್ಧ ದೂರು ದಾಖಲಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.